ಪಣಜಿ: ಗೋವಾದ ಸಂತ್ ಫ್ರಾನ್ಸಿಸ್ ಕ್ಸೇವಿಯರ್ ದರ್ಶನ ಸಮಾರಂಭವು ನವೆಂಬರ್ 21, 2024 ರಿಂದ ಜನವರಿ 4, 2025 ರವರೆಗೆ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಉತ್ಸವವನ್ನಾಗಿಸುವ ಇಂಗಿತವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಭವ್ಯ ಸಮಾರಂಭಕ್ಕೆ ಪೋಪ್ ಅವರನ್ನು ಆಹ್ವಾನಿಸಲಾಗಿದೆ, ಆದರೆ ಅವರ ಉಪಸ್ಥಿತಿಯನ್ನು ಈ ಸಮಯದಲ್ಲಿ ಖಾತರಿಪಡಿಸಲಾಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಸಂತ್ ಫ್ರಾನ್ಸಿಸ್ ಕ್ಸೇವಿಯರ್ ದರ್ಶನ ಸಮಾರಂಭ ಸಮಿತಿಯ ಸಭೆಯು ಪರ್ವರಿಯಲ್ಲಿರುವ ಸಚಿವಾಲಯದಲ್ಲಿ ನಡೆಯಿತು. ಸಭೆಯಲ್ಲಿ ಸಾರಿಗೆ ಸಚಿವ ಮಾವಿನ್ ಗುದಿನ್ಹೊ, ಪರಿಸರ ಸಚಿವ ಅಲೆಕ್ಸ್ ಸಿಕ್ವೇರಾ, ಶಾಸಕ ರಾಜೇಶ್ ಫಲ್ದೇಸಾಯಿ, ಸಂಚಾಲಕ ಫಾದರ್ ಹೆನ್ರಿಕ್ ಪಿಂಟೋ, ಫಾದರ್ ಲಾರೆನ್ಸ್, ಕಂದಾಯ ಇಲಾಖೆ ಕಾರ್ಯದರ್ಶಿ ಸಂದೀಪ್ ಜಾಕಿಸ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾರಿಗೆ, ಭದ್ರತಾ ವ್ಯವಸ್ಥೆ, ಪ್ರಾಥಮಿಕ ಸೌಲಭ್ಯಗಳ ಕಾಮಗಾರಿಗಳನ್ನು ಪರಿಶೀಲಿಸಲಾಯಿತು. ಈ ವರ್ಷ ಸಮಾರಂಭವು ನವೆಂಬರ್ 21, 2024 ರಿಂದ ಜನವರಿ 4, 2025 ರವರೆಗೆ 45 ದಿನಗಳವರೆಗೆ ನಡೆಯಲಿದೆ. ನವೆಂಬರ್ 21 ರಂದು ನೊವೆನಾ ಮತ್ತು ಡಿಸೆಂಬರ್ 3 ರಂದು ಫೆಸ್ಟ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ವೆಬ್‍ಸೈಟ್ ಅನ್ನು ಪ್ರಾರಂಭಿಸಲಾಗುತ್ತದೆ. ಭಕ್ತರು ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಶೌಚಾಲಯ, ವಾಹನ ನಿಲುಗಡೆ, ರಸ್ತೆ ಮುಂತಾದ ಮೂಲಸೌಕರ್ಯಗಳಿಗೆ 200 ಕೋಟಿ ವೆಚ್ಚ ಮಾಡಲಾಗುವುದು. ಅಲ್ಲದೆ, ಈ ಸಮಾರಂಭಕ್ಕೆ ಇತರೆ ಖರ್ಚು ಸೇರಿ ಸುಮಾರು 400 ಕೋಟಿ ವೆಚ್ಚವಾಗಲಿದೆ. ಮೂಲಸೌಕರ್ಯಕ್ಕಾಗಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಸಂತ ಫ್ರಾನ್ಸಿಸ್ ಕ್ಸೇವಿಯರ್ ರೆಲಿಕ್ ದರ್ಶನ ಸಮಾರಂಭವು ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಹಿಂದೆ 2004 ಮತ್ತು 2014ರಲ್ಲಿ ಸ್ಮಾರಕ ವೀಕ್ಷಣೆ ಸಮಾರಂಭ ನಡೆದಿತ್ತು. ಹಿಂದಿನ ಎರಡೂ ಆಚರಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತು, ಬಿಜೆಪಿ ಆಡಳಿತದಲ್ಲಿ ಆಚರಣೆಗೆ ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿತ್ತು. ಹಳೆ ಗೋವಾ ಬೈಪಾಸ್ ರಸ್ತೆಯನ್ನು 2014 ರಲ್ಲಿ ಪ್ರಾರಂಭಿಸಲಾಯಿತು. ಚಿಂಬಲ್ ಜಂಕ್ಷನ್‍ನಲ್ಲಿರುವ ಬೈಪಾಸ್‍ನ ಇನ್ನೊಂದು ಬದಿ ಪ್ಲೈ ಓವರ್‍ನ್ನು ಈ ವರ್ಷದ ಸಮಾರಂಭದ ಆರಂಭಕ್ಕೂ ಮುನ್ನ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.