ಸುದ್ಧಿಕನ್ನಡ ವಾರ್ತೆ
Goa: ಮುಖವಾಡ ಧರಿಸಿ ಮನೆಗಳ್ಳತನ ಮಾಡುವ ಕಳ್ಳರ ತಂಡ ರಾಜ್ಯದಲ್ಲಿ ಅವಾಂತರ ಸೃಷ್ಟಿಸಿದೆ. ಈ ತಂಡ ಇದುವರೆಗೆ ಮಾಸ್ಕ ಧರಿಸಿ 19 ಮನೆಗಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ವಿವಿದೆಡೆ ಕಳ್ಳತನ ನಡೆಸಿರುವ ಈ ಗ್ಯಾಂಗ್‍ನಿಂದ ಸುಮಾರು 500 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಳೆದ 6 ತಿಂಗಳಿನಿಂದ ಉತ್ತರ ಗೋವಾದಲ್ಲಿ ಮುಖವಾಡ ಧರಿಸಿ ಮನೆಗಳ್ಳತನ ನಡೆಸುತ್ತಿರುವುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ. ಈ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಹೇಳಿದ್ದಾರೆ.

ಕಳೆದ ವಾರ ಮುಖವಾಡ ಧರಿಸಿ ಕಳ್ಳತನ ಮಾಡುತ್ತಿದ್ದ ಮಾರಿಯೋ ಸಂತಾನಾ ಬ್ಯಾಪ್ಟಿಸ್ಟಾ ಮತ್ತು ಆತನ ಸಹಚರ ಮೊಹಮ್ಮದ್ ಸುಫಿಯಾನ್ ಅವರನ್ನು ಪರ್ವರಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಸಂಪೂರ್ಣ ವಿಚಾರಣೆಯ ಸಮಯದಲ್ಲಿ, ಮಾರಿಯೋ ಬ್ಯಾಪ್ಟಿಸ್ಟಾ ಫೆಬ್ರವರಿ 2024 ರಿಂದ ರಾಜ್ಯದಾದ್ಯಂತ ಮುಖವಾಡ ಧರಿಸಿ ಹಲವಾರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣವನ್ನು ಫಿಲಿಪ್ ರಾಟೊಗೆ ಹಸ್ತಾಂತರಿಸಿರುವುದಾಗಿಯೂ ಆತ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಅವರು ಕದ್ದ ಚಿನ್ನಾಭರಣಗಳನ್ನು ಮಡಗಾಂವನಲ್ಲಿ ಸಣ್ಣ ಆಭರಣ ಅಂಗಡಿ ಹೊಂದಿರುವ ಅಕ್ಕಸಾಲಿಗ ಸಮರ್ ಪಾಲ್‍ಗೆ ಮಾರಾಟ ಮಾಡುತ್ತಾರೆ. ನಂತರ ಪರ್ವರಿ ಪೊಲೀಸರು ಫಿಲಿಪ್ ರಾಟೊ ಮತ್ತು ಸಮರ್ ಪಾಲ್ ಅವರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಈ ಕಳ್ಳತನ ಪ್ರಕರಣದ ತನಿಖೆಯ ವೇಳೆ ಆರೋಪಿ ಸಮರ್ ಪಾಲ್ ನಿಂದ ಒಟ್ಟು 442 ಗ್ರಾಂ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ವಿವಿದೆಡೆ ಕದ್ದ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ ಕೌಶಲ್ ಹೇಳಿದ್ದಾರೆ.

ಮಾಸ್ಕ್ ಗ್ಯಾಂಗ್ ಪರ್ವರಿಯಲ್ಲಿ 4, ಪಣಜಿಯಲ್ಲಿ 4, ಆಗಶಿಯಲ್ಲಿ 2, ಮಾಪ್ಸಾದಲ್ಲಿ 1, ಹಣಜುಣನಲ್ಲಿ 2, ಫೋಂಡಾದಲ್ಲಿ 5 ಮತ್ತು ಓಲ್ಡ್ ಗೋವಾದಲ್ಲಿ 1 ಕಡೆ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಮಾಹಿತಿ ನೀಡಿದ್ದಾರೆ.