ಪಣಜಿ: ಕಾರಸವಾಡ ಮ್ಹಾಪಾಸಾದ ದಿಯೋದಿತಾ ಫೆನಾರ್ಂಡಿಸ್ (64) ಅವರ ಮೃತದೇಹವು ನಾಯಕವಾಡ-ಕಲಂಗುಟ್‍ನಲ್ಲಿರುವ ಫ್ಲಾಟ್‍ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂದ ಮಾಹಿತಿಯ ಪ್ರಕಾರ, ಮಹಿಳೆಯ ಮೊಬೈಲ್ ಮತ್ತು ಪರ್ಸ್ ಕಾಣೆಯಾಗಿದೆ ಮತ್ತು ಫ್ಲಾಟ್‍ಗೆ ಹೊರಗಿನಿಂದ ಬೀಗ ಹಾಕಲಾಗಿದೆ. ಮಹಿಳೆಯನ್ನು ಕೊಲೆ ಮಾಡಿರಬಹುದು ಎಂದು ಊಹಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 1:10ಕ್ಕೆ ಈ ಘಟನೆ ಬೆಳಕಿಗೆ ಬಂದಿದೆ. ದಿಯೋದಿತಾ ಫೆನಾರ್ಂಡಿಸ್ ಗುರುವಾರ ಮಧ್ಯಾಹ್ನ ನಾಯಕವಾಡ ಕಲಂಗುಟ್‍ನಲ್ಲಿರುವ ಬೆನ್ಸನ್ ಕಟ್ಟಡದ ಮೂರನೇ ಮಹಡಿ ಫ್ಲಾಟ್‍ಗೆ ಬಂದಿದ್ದರು. ಅವರು ಹೇಳಿದ ಫ್ಲಾಟ್‍ನ ಪೇಂಟಿಂಗ್ ಅನ್ನು ಕೈಗೊಂಡಿದ್ದರು. ಫನಾರ್ಂಡಿಸ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ, ಅವರ ಸಹೋದರಿ ಫ್ಲ್ಯಾಟ್‍ನ ಉಸ್ತುವಾರಿಗೆ ತಿಳಿಸಿದ್ದಾರೆ. ತಡರಾತ್ರಿ ಅಲ್ಲಿಗೆ ತಲುಪಿದಾಗ ಬಾಗಿಲು ಹಾಕಿರುವುದು ಕಂಡು ಬಂತು.
ಅವರು ಮತ್ತೊಂದು ಕೀಲಿಯೊಂದಿಗೆ ಬಾಗಿಲು ತೆರೆದ ನಂತರ, ಫನಾರ್ಂಡಿಸ್ ಡೈನಿಂಗ್ ಹಾಲ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಟ್ಟಡದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕಲಂಗುಗುಟ ಪೊಲೀಸ್ ಇನ್‍ಸ್ಪೆಕ್ಟರ್ ಪರೇಶ್ ನಾಯ್ಕ್, ಸಬ್ ಇನ್‍ಸ್ಪೆಕ್ಟರ್ ಪರೇಶ್ ಸಿನಾರಿ, ಕಿರಣ್ ನಾಯ್ಕ್ ತಮ್ಮ ಸಹೋದ್ಯೋಗಿಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಪಂಚನಾಮ ಮಾಡಿ ಶವವನ್ನು ಗೋಮೆಕೋಗೆ ಕಳುಹಿಸಲಾಯಿತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಫೆನಾರ್ಂಡಿಸ್ ಸಾವಿಗೆ ಕಾರಣ ತಿಳಿಯಲಿದೆ. ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.