ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ತಾಲೂಕಿನ ಹುನಗುಂದ
ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಆಟೋ ರಿಕ್ಷಾದ ಗ್ಯಾಸ್ ಸಿಲಿಂಡ‌ರ್ ಸ್ಫೋಟಗೊಂಡು, ವಾಹನ ಹಾಗೂ ಪಕ್ಕದ ಮನೆ ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.

ಗ್ರಾಮದ ನಿವಾಸಿ ವೀರಭದ್ರಪ್ಪ ಹಡಪದ ಎಂಬುವವರಿಗೆ ಸೇರಿದ ಆಟೋ ರಿಕ್ಷಾವನ್ನು ಮನೆಯ ಮುಂದೆ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಹಠಾತ್ತನೆ ಆಟೋದಲ್ಲಿದ್ದ ಸಿಲಿಂಡ‌ರ್ ಸ್ಪೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಬೆಂಕಿ ಕ್ಷಣಾರ್ಧದಲ್ಲಿ ಆಟೋವನ್ನು ಆವರಿಸಿಕೊಂಡಿದ್ದಲ್ಲದೆ, ಪಕ್ಕದಲ್ಲಿದ್ದ ಮನೆಗೂ ವ್ಯಾಪಿಸಿತು. ಪರಿಣಾಮವಾಗಿ ಆಟೋ ರಿಕ್ಷಾ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಮನೆಯ ಮೇಲ್ಬಾವಣಿ ಹಾಗೂ ಒಳಗಿದ್ದ ಜೀವನಾವಶ್ಯಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಸ್ಫೋಟದ ಶಬ್ದ ಕೇಳಿ ಗಾಬರಿಗೊಂಡ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಮುಂಡಗೋಡು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಸ್ಫೋಟಕ್ಕೆ ಪ್ರಾಥಮಿಕ ಕಾರಣವೆಂದು ಶಂಕಿಸಲಾಗಿದೆ. ಈ ಕುರಿತು ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ವಾಹನಗಳಲ್ಲಿ ಅಳವಡಿಸುವ ಗ್ಯಾಸ್‌ ಸಿಲಿಂಡರ್‌ಗಳ ಬಗ್ಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನಿಯಮಿತವಾಗಿ ಸುರಕ್ಷತಾ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.