ಸುದ್ಧಿಕನ್ನಡ ವಾರ್ತೆ
ದಾಂಡೇಲಿ : ಅಕ್ರಮವಾಗಿ ಕಾಯ್ದಿಟ್ಟ ತಾಲೂಕಿನ ಅಂಬೇವಾಡಿ ಅರಣ್ಯ ಪ್ರದೇಶದಲ್ಲಿ ಬೀಟೆ ಮರವೊಂದನ್ನು ಕಟಾವು ಮಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆಯವರು ಬಂಧಿಸಿ, ಕಟಾವು ಮಾಡಿದ ಬೀಟೆ ಮರದ ತುಂಡನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಬಂಧಿತ ಆರೋಪಿ ಸ್ಥಳೀಯ ನಿವಾಸಿಯಾಗಿದ್ದು ಸರದಾರ ಮಹಮ್ಮದ್ ರಾಜೇಸಾಬ ನಾಯಕ ಈತನು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಬೀಟೆ ಜಾತಿಯ ಮರವನ್ನು ಕಟಾವಣೆ ಮಾಡುತ್ತಿರುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ಅದನ್ನು ನೋಡಿ ಬೀಟೆ ಮರದ ನಾಟಗಳನ್ನು ವಶಪಡಿಸಿಕೊಂಡು, ಕರ್ನಾಟಕ ಅರಣ್ಯ ಕಾಯ್ದೆ 1963 ರಲ್ಲಿ ಹಾಗೂ ಕರ್ನಾಟಕ ಅರಣ್ಯ ನಿಯಮ 1969ರಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ. ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌಹ್ವಾಣ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಎನ್.ಎಲ್.ನದಾಫ್, ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ ಕೆ.ಎನ್, ಹನುಮಂತ ಆಲದಗಿಡದ, ಸಿಬ್ಬಂದಿಗಳಾದ ಸಂದೀಪ್ ಗೌಡ, ಪ್ರಹ್ಲಾದ ರೆಡ್ಡಿ, ಶಂಕರ್.ಜಿ.ನಾಯಕ ಹಾಗೂ ಇತರ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯನ್ನು ನಡೆಸಿದ್ದರು.