ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಬಾಡಿಗೆ ಮನೆಯಲ್ಲಿರುವ ಬಾಡಿಗೆದಾರರ ಸಂಪೂರ್ಣ ಮಾಹಿತಿಯನ್ನು ಆಯಾ ಸ್ಥಳೀಯ ಪೋಲಿಸ್ ಠಾಣೆಗೆ ಮನೆ ಮಾಲೀಕರು ಒದಗಿಸುವುದು ಖಡ್ಡಾಯವಾಗಿದ್ದು, ಇದಕ್ಕೆ ತಪ್ಪಿದಲ್ಲಿ 10,000 ರೂ ದಂಡ ವಿಧಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೋಲಿಸ್ ಇಲಾಖೆ ಕೈಗೆತ್ತಿಕೊಂಡ ಅಭಿಯಾನದಲ್ಲಿ ರಾಜ್ಯದಲ್ಲಿ ಇದುವರೆಗೂ 1500 ಅರ್ಜಿಗಳು ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಗೋವಾ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ,ಧರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವವರ ಸಂಪೂರ್ಣ ದಾಖಲಾತಿಯನ್ನು ಸ್ಥಳೀಯ ಪೋಲಿಸ್ ಠಾಣೆಗೆ ಖಡ್ಡಾಯವಾಗಿ ಸಲ್ಲಿಸುವಂತೆ ಸರ್ಕಾರ ಮನೆ ಮಾಲೀಕರಿಗೆ ಆದೇಶ ಹೊರಡಿಸಿದೆ. ಇದಕ್ಕೆ ತಪ್ಪಿದಲ್ಲಿ 10,000 ರೂ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.

ಗೋವಾ ರಾಜ್ಯದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು ಮತ್ತು ವಿವಿಧ ಉದ್ಯೋಗದಲ್ಲಿ ತೊಡಗಿಕೊಂಡಿರುವವರು ಗೋವಾದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಬಾಡಿಗೆದಾರರ ಸಂಪೂರ್ಣ ದಾಖಲಾತಿಯನ್ನು ಗೋವಾ ಪೋಲಿಸರಿಗೆ ನೀಡುವುದು ಖಡ್ಡಾಯವಾಗಿದೆ. ಪೋಲಿಸರು ರಾಜ್ಯಾದ್ಯಂತ ಹಮ್ಮಿಕೊಂಡ ಈ ಅಭಿಯಾನ ಬಹು ವೇಗವಾಗಿ ಸಾಗುತ್ತಿದ್ದು ಪೋಲಿಸ್ ಠಾಣೆಗೆ ಈ ಕುರಿತಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಕೆಲವೆಡೆಯಂತೂ ಪೋಲಿಸರೇ ಮನೆ ಮನೆಗೆ ತೆರಳಿ ತಪಾಸಣೆ ನಡೆಸಿ ಬಾಡಿಗೆದಾರರ ದಾಖಲಾತಿ ಪಡೆದುಕೊಳ್ಳುತ್ತಿರುವ ಕುರಿತಂತೆಯೂ ವರದಿಯಾಗಿದೆ.