ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಾಣಕೋಣದಲ್ಲಿರುವ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ 550 ನೇಯ ವರ್ಧಂತಿ ಉತ್ಸವದ ಅಂಗವಾಗಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ರವರು ಶ್ರೀಮಠಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ. ಈ ಸಿದ್ಧತಾ ಕಾರ್ಯಗಳನ್ನು ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿ ರವರು ಪರಿಶೀಲನೆ ನಡೆಸಿದರು. ಸುರಕ್ಷತೆಯ ದೃಷ್ಠಿಯಿಂದ ಇಡೀ ಉತ್ಸವಕ್ಕೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಕಾಣಕೋಣ ಉಪಜಿಲ್ಲಾಧಿಕಾರಿ ಪ್ರತಾಪರಾವ್ ಗಾಂವಕರ್ ರವರು ಹೆಲಿಪ್ಯಾಡನ್ನು ಪರಿಶೀಲಿಸಿದರು.
ರಥದ ಆಗಮನ…
ನವೆಂಬರ್ 22 ರಂದು ಪೈಂಗಿಣಿಯಲ್ಲಿರುವ ಶ್ರೀ ಪರಶುರಾಮ ದೇವಾಲಯದ ಬಳಿ ಮೊದಲು ರಥದ ಆಗಮನವಾಗುತ್ತದೆ. ದಿಗ್ವಿಜಯ ರಥವನ್ನು ಸ್ವಾಗತಿಸಲು ಶ್ರೀ ಪರಶುರಾಮ ದೇವಾಲಯದ ಪ್ರವೇಶದ್ವಾರದ ಬಳಿ ವಿಶೇಷ ತೋರಣವನ್ನು ನಿರ್ಮಿಸಲಾಗಿದೆ. ಮಠದ ಭಕ್ತಾದಿಗಳು ವಿಶೇಷ ಸಾಂಪ್ರದಾಯಿಕ ಉಡುಪಿನಲ್ಲಿ ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೋವಾದಲ್ಲಿ ಒಟ್ಟೂ 20 ಶ್ರೀರಾಮ ನಾಮ ಜಪ ಕೇಂದ್ರಗಳಿವೆ. ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ದಿಗ್ವಿಜಯ ರಥವು 26 ರಂದು ಪರ್ತಗಾಳಿ ಮಠಕ್ಕೆ ಆಗಮಿಸಲಿದೆ.
ಶ್ರೀರಾಮನ ಮೂರ್ತಿ ಎರಡು ದಿನಗಳಲ್ಲಿ ಪೂರ್ಣ….
ಪರ್ತಗಾಳಿ ಮಠದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ 77 ಅಡಿ ಎತ್ತರದ ಶ್ರೀರಾಮನ ಭವ್ಯ ಪ್ರತಿಮೆಯು ಮುಂಬರುವ ಎರಡು ದಿನಗಳಲ್ಲಿ ಪೂರ್ಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮನ ಪ್ರತಿಮೆಯ ಕಂಚಿನ ಭಾಗಗಳು ಈಗಾಗಲೇ ಮಠಕ್ಕೆ ಬಂದು ತಲುಪಿದೆ. ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿ ವರದಿ ಪಡೆದುಕೊಂಡರು.
ಗೋವಾದ ಕಾಣಕೋಣದಲ್ಲಿರುವ ಪರ್ತಗಾಳಿ ಮಠದಲ್ಲಿ ಮಿನಿ ಅಯೋಧ್ಯೆಯನ್ನೇ ನಿರ್ಮಿಸಲಾಗುತ್ತಿದೆ ಎಂದರೂ ತಪ್ಪಾಗಲಾರದು. ಒಟ್ಟೂ 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟೂ ಸುಮಾರು 3 ರಿಂದ 4 ಲಕ್ಷ ಜನ ಭಕ್ತಾದಿಗಳು ಆಗಮಿಸುವ ಸಾಧ್ಯತೆಯಿದ್ದು, ಆಗಮಿಸುವ ಭಕ್ತರಿಗೆ ಊಟೋಪಚಾರ ವ್ಯವಸ್ಥೆಗೆ ಮಠದಿಂದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
