ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಯಾವೆಲ್ಲ ಕೆಲಸ ಕಾರ್ಯಗಳಲ್ಲಿ ಕನ್ನಡಿಗರು ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ನಾವು ಊಹಿಸಲೂ ಕೂಡ ಸಾಧ್ಯವಿಲ್ಲ. ಹೌದು ಗೋವಾ ರಾಜಧಾನಿ ಪಣಜಿಯ ಸಾಂತಿನೇಜ್ ನಲ್ಲಿರುವ ಸ್ಮಶಾನ ಭೂಮಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕನ್ನಡಿಗರೇ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ನಮ್ಮೆಲ್ಲರ ಜೀವನದಲ್ಲಿ ಕೊನೇಯ ಕ್ಷಣದಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳ ಬಗ್ಗೆ ಯಾರೂ ಕೂಡ ವಿಚಾರ ಮಾಡುವುದಿಲ್ಲ. ಇಂತವರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯವನ್ನು ಗೋವಾ ಕನ್ನಡ ಸಮಾಜ ಮಾಡಿದೆ.

ಗೋವಾ ರಾಜಧಾನಿ ಪಣಜಿಯಲ್ಲಿ ಭಾನುವಾರ ಆಯೋಜಿಸಿದ್ದ ಕರುನಾಡ ಸ್ವರಸಿರಿ ವೈಭವ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರ ಮೂಲಕ ಗೋವಾ ಕನ್ನಡ ಸಮಾಜವು ಸ್ಮಶಾನ ಭೂಮಿಯಲ್ಲಿ ಸೇವೆಸಲ್ಲಿಸುವ ಕನ್ನಡಿಗರನ್ನು ಗೌರವಿಸುವ ಕಾರ್ಯ ಮಾಡಿದೆ. ಪಣಜಿಯ ಸಾಂತಿನೇಜ್ ಸ್ಮಶಾನ ಭೂಮಿಯಲ್ಲಿ ಕಳೆದ ಹಲವು ವರ್ಷಗಳಿಂದ ಕನ್ನಡಿಗರಾದ ರಾಮದಾಸ ಹರಿಜನ್, ಪರಶುರಾಮ ಬೆಟ್ಟಣ್ಣನವರ್, ಆನಂದ ಮೂಲಿಮನಿ, ರಾಜೇಶ್ ಖೋಲಕರ್, ಬಸು ಖೋಲಕರ್ ರವರು ಸೇವೆಸಲ್ಲಿಸುತ್ತಿದ್ದಾರೆ.

ಗೋವಾದಲ್ಲಿ ಪ್ರತಿಯೊಂದೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಕನ್ನಡಿಗರ ಪಾತ್ರವಿದೆ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಉದ್ದಿಮೆಗಳನ್ನು ನಡೆಸುವ ಕನ್ನಡಿಗರೂ ಇದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಸ್ಮಶಾನ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕನ್ನಡಿಗರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತ ಬಂದಿದ್ದಾರೆ. ಇಂತಹ ಕನ್ನಡಿಗರನ್ನು ಗುರುತಿಸಿ ಗೋವಾದಲ್ಲಿರುವ ಎಲ್ಲ ಕನ್ನಡಿಗರು ಸಹಾಯಹಸ್ತ ನೀಡುವ ಅಗತ್ಯವಿದೆ.

ಗೋವಾದಲ್ಲಿ ಸುಮಾರು 4 ಲಕ್ ಜನ ಕನ್ನಡಿಗರಿದ್ದಾರೆ. ಆದರೆ ಗೋವಾದಲ್ಲಿ ಕನ್ನಡಿಗರು ಉದರ ನಿರ್ವಹಣೆಗಾಗಿ ಎಂತಹ ಕಷ್ಟದ ಕೆಲಸ ಬಂದರೂ ಕೂಡ ಜಗ್ಗದೆಯೇ ನಿಷ್ಠೆಯಿಂದ ಮಾಡುತ್ತ ತಮ್ಮ ಜೀವನ ನಡೆಸಿಕೊಂಡು ಹೋಗುವ ಗಟ್ಟಿ ಗುಂಡಿಗೆಯವರು ಎಂಬುದಕ್ಕೆ ಗೋವಾಕ್ಕೆ ಬಂದು ಸ್ಮಶಾನ ಭೂಮಿಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಈ ಕನ್ನಡಿಗರೇ ಸಾಕ್ಷಿ.