ಸುದ್ದಿ ಕನ್ನಡ ವಾರ್ತೆ
ಶಿರಸಿ/ಜೋಯಿಡಾ:ತಾಲೂಕಿನ ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್ )ಕಚೇರಿ ಎದುರು ದಿನಾಂಕ:8-10-2025 ರಂದು ಜಿಲ್ಲಾ ಕುಣಬಿ ಸಮಾಜ ಮುಂದಾಳತ್ವ ಹಾಗೂ ಎಲ್ಲಾ ಸಮಾಜದ ಸಹಕಾರದೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ, ಕಾನೂನು ತೊಡಕು, ತಿದ್ದುಪಡಿಗಳು, ನೊಟಿಪಿಕೆಶನ್ ಗಳು ಹಾಗೂ ಸಮಸ್ಯೆಗಳ ಪರಿಹಾರೋಪಾಯಗಳ ಬಗ್ಗೆ ಸಾವಿರಾರು ಸಂಖ್ಯೆಯಲ್ಲಿ ಮೂಲನಿವಾಸಿಗಳು ಸೇರುವುದರ ಮೂಲಕ ಉಗ್ರ ಪ್ರತಿಭಟನೆ ಮಾಡಿ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದರು.
ಸ್ಥಳಕ್ಕೆ ಬಂದ ತಹಶೀಲ್ದಾರ ಜೋಯಿಡಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಣಶಿ ಕುಂಬಾರವಾಡಾರವರು ಅಕ್ಟೋಬರ್ 30 ಒಳಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರು.
ಇದಾದ ನಂತರ ಅಕ್ಟೋಬರ್ 24 ಹಾಗೂ ನವೆಂಬರ 5 ರಂದು ಎರಡು ಸಲ ತಹಶಿಲ್ದಾರ ಜೋಯಿಡಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಣಶಿ ಕುಂಬಾರವಾಡಾ ಇವರಿಗೆ ಜಿಲ್ಲಾ ಕುಣಬಿ ಸಮಾಜದಿಂದ ಮನವಿ ನೀಡಿ ಸಭೆಯ ದಿನಾಂಕ ನಿಗದಿ ಪಡಿಸಲು ಅಗ್ರಹಿಸಲಾಗಿತ್ತು. ದಿನಾಂಕ ನಿಗದಿ ಪಡಿಸಲು ಅಧಿಕಾರಿಗಳು ವಿಫಲವಾಗಿದ್ದರಿಂದ, ಹೋರಾಟದಲ್ಲಿ ಭಾಗವಹಿಸಿದ ಸ್ಥಳಿಯರಿಗೆ ಉತ್ತರ ನಿಡಲು ಹೋರಾಟಗಾರ ಪ್ರಮುಖರಿಗೆ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಇಂದು ದಿನಾಂಕ: 11-11-2025 ರಂದು ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರ ವೇದಿಕೆಯಿಂದ ಶಿರಸಿಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಶಿರಸಿರವರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ನೋಟಿಸ್ ನೀಡಿ ತೊಂದರೆ ನೀಡುವುದನ್ನು ನಿಲ್ಲಿಸಲಿ ಎಂದು ಹೇಳಲು ಸಭೆ ಕರೆಯಲಾಗಿತ್ತು.
ಸದರ ಸಭೆಯಲ್ಲಿ ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಹಾಗೂ ಅರಣ್ಯ ಹಕ್ಕು ಹೋರಾಟ ಸಮಿತಿ ಜೋಯಿಡಾ ಇದರ ಸಂಚಾಲಕರಾದ ಸುಭಾಷ ಗಾವಡಾ ರವರು ಜೊಯಿಡಾ ತಾಲೂಕಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿಡುವ ಕಿರುಕುಳ, ಸ್ಥಳಿಯರು ಬದುಕಲು ಇರುವ ಕಾನೂನು ಅವಕಾಶಗಳು, ಪರಿಹಾರೋಪಾಯಗಳು ಮತ್ತು ಸ್ಥಳೀಯ ಸಮಸ್ಯೆಗಳನ್ನು ಸುದೀರ್ಘ ಮಾತನಾಡಿದರು. ಅರಣ್ಯ ಅತಿಕ್ರಮಣದಾರರಿಗೆ ಕಾನೂನಿನಲ್ಲಿ ಇರುವ ಹಕ್ಕುಗಳ ಬಗ್ಗೆ, ಜೋಯಿಡಾ ತಾಲೂಕಿನ ಸಮಸ್ಯೆಗಳನ್ನು ಅಧ್ಯಕ್ಷ ರವಿಂದ್ರ ನಾಯ್ಕರವರು ಅಧಿಕಾರಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಇದರ ಫಲವಾಗಿ ಮಾನ್ಯ ಟಿ. ಹಿರಾಲಾಲ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ವೃತ್ತ ಶಿರಸಿರವರು ಬರುವ 15 ದಿನದೊಳಗೆ ತಾವೇ ಖುದ್ದಾಗಿ ಜೋಯಿಡಾಕ್ಕೆ ಬಂದು ಸ್ಥಳಿಯರ ಸಮಸ್ಯೆಯನ್ನು ಆಲಿಸುವ ಮೂಲಕ ಪರಿಹಾರೋಪಾಯ ಕಂಡುಕೊಳ್ಳುವ ಬಗ್ಗೆ ಸಭೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಸ್ ಪಿ. ಕಾರವಾರ ದೀಪನ ಎಮ್ ಎನ್, ಅಪರ್ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಹಾಯಕ ಕಮಿಷನರ್ ಶಿರಸಿ ಕಾವ್ಯಾರಾಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ, ಅರಣ್ಯ ಹಕ್ಕು ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ರವಿಂದ್ರ ನಾಯ್ಕ, ಸುಭಾಷ ಗಾವಡಾ ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ ಹಾಗೂ ಇತರರು ಇದ್ದರು.
