ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಲ್ಲಿ ನಡೆದ ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದCPI(M) ಕಾರ್ಯದರ್ಶಿ ಯಮುನಾ ಗಾಂವಕರ ಅವರು ಹೋರಾಟದಲ್ಲಿ ಶಿಸ್ತೂ, ಜವಾಬ್ದಾರಿಯೂ ಮುಖ್ಯವೆಂದು ತಿಳಿಸಿದರು.
ನಾವು ಸಂಜೆ ವೇಳೆಗೆ ಕಾರ್ಯ ಕ್ರಮಗಳನ್ನು ಮುಗಿಸಿ ಮಕ್ಕಳನ್ನು ಶಾಲೆಗೆ ತಯಾರಾಗುವಂತೆ ನೋಡಿಕೊಳ್ಳಬೇಕು. ಹೋರಾಟ ನಮ್ಮ ಹಕ್ಕಿಗಾಗಿ, ಆದರೆ ಬದುಕನ್ನೂ ನಾವು ಚೆನ್ನಾಗಿ ಮಾಡಿಕೊಂಡು ಹೋಗಬೇಕು. ನಮ್ಮ ಮಕ್ಕಳು ನಮ್ಮ ಮುಂದಿನ ಪೀಳಿಗೆಯವರು. ಅವರಿಗೆ ನಾವು ಅನುಭವಿಸಿದ ಕಷ್ಟ ಅನುಭವಿಸಬಾರದು. ಅದಕ್ಕಾಗಿ ನಾವು ಹೊಣೆಗಾರಿಕೆಯಿಂದ ಹೋರಾಡಬೇಕು.
ಈ ಹೋರಾಟದಲ್ಲಿ ಭಾಗವಹಿಸಿರುವ ಎಲ್ಲರಿಗೂ ನಾನು ಮನವಿ ಮಾಡುತ್ತೇನೆ,ಬೇಡಿಕೆ ಈಡೇರುವವರಿಗೆ ಪ್ರತಿ ದಿನ ಮತ್ತೆ ಅದೇ ಒಗ್ಗಟು, ಅದೇ ಶಕ್ತಿ, ಅದೇ ಧೈರ್ಯದೊಂದಿಗೆ ಹೋರಾಟ ಮುಂದುವರಿಸೋಣ. ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಹಕ್ಕು ಎಂದರೆ ಬೇಡಿಕೆ ಅಲ್ಲ — ಅದು ನಮ್ಮ ಬದುಕಿನ ಮೂಲ.
ನಾವು ಹೋರಾಟ ಮಾಡುತ್ತಿರುವ ಈ ಜೋಯಿಡಾ ಪ್ರದೇಶವು ವಿವಿಧ ಜಾತಿ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕುತ್ತಿರುವ ನೆಲ. ಇಲ್ಲಿ ಹೋರಾಟ ವಿಭಜನೆಗಾಗಿ ಅಲ್ಲ, ನ್ಯಾಯಕ್ಕಾಗಿ. ರೈತರು, ಕೂಲಿ ಕಾರ್ಮಿಕರು, ಆದಿವಾಸಿಗಳ ಬದುಕು ಮತ್ತು ಭೂ–ಸಂಪತ್ತಿನ ಹಕ್ಕುಗಳ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ.
ಬೃಹತ್ ಕಟ್ಟಡಗಳು, ದೊಡ್ಡ ಯೋಜನೆಗಳು ಎಲ್ಲವೂ ನಮ್ಮ ಗ್ರಾಮದ ನೆಲದಲ್ಲಿ ನಿಂತಿವೆ. ಸಂಪತ್ತು ಇಲ್ಲಿ ಸೃಷ್ಟಿಯಾಗಿದೆ. ಹಾಗಾದರೆ ಆ ಸಂಪತ್ತಿನ ಪಾಲುದಾರರೂ ನಾವು. ರಸ್ತೆ ಕೊಡಬೇಕಾದಲ್ಲಿ ಕೊಡಲಿಲ್ಲ, ಅಭಿವೃದ್ಧಿ ಕೊಡಬೇಕಾದಲ್ಲಿ ತಿರುಗಿಸಲಾಯಿತು. ಹಲವಾರು ರಸ್ತೆ ಯೋಜನೆಗಳು ಅರ್ಧಕ್ಕೆ ಬಿದ್ದಿವೆ. ಇದು ಸ್ವಾಭಾವಿಕ ನ್ಯಾಯವಲ್ಲ.ನಮ್ಮ ಹೋರಾಟ ಪ್ರಜಾಸತ್ತಾತ್ಮಕ — ಸತ್ಯ, ಧೈರ್ಯ ಮತ್ತು ಸಾಮೂಹಿಕ ಶಕ್ತಿಯ ಮೇಲೆ ನಿಂತಿದೆ.ಸರ್ಕಾರ ಹೆಚ್ಚು ಕಾಲ ನಮ್ಮನ್ನು ಕಾಯಿಸಬಾರದು.
ನ್ಯಾಯ ಸಿಗುವವರೆಗೂ ನಾವು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಸ ಗಾವಡಾ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕುಣಬಿ ಸಮಾಜದ ಹಿರಿಯ ಮುಖಂಡರಾದ ಮಾಬಳು ಕುಂಡಲಕರ,ತಾಲೂಕಾ ಕುಣಬಿ ಸಮಾಜದ ಕಾರ್ಯದರ್ಶಿ ದಯಾನಂದ ಕುಮಗಾಳಕರ ಇದ್ದರು.ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಕಾರ್ಯದರ್ಶಿ ರಾಜೇಶ ಗಾವಡಾ ಪಾದಯಾತ್ರೆ ಹಾಗೂ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಕಾರ್ಯಕ್ರಮದ ಸ್ವಾಗತ,ನಿರೂಪಣೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
