ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ : ಕಳೆದ ಹಲವಾರು ತಿಂಗಳಿAದ ಬಾಳೆ ಹಣ್ಣಿನ ದರ ಹೆಚ್ಚಾಗಿತ್ತು. ಆದರೆ ಅಗಸ್ಟ್ ನಂತರ ಬಾಳೆ ಹಣ್ಣಿನ ದರದಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ಬಾಳೆ ಹಣ್ಣುಗಳನ್ನು ಬೆಳೆದ ರೈತರು ಪರದಾಡುವಂತಾಗಿದೆ.
ಬಾಳೆ ಹಣ್ಣುಗಳನ್ನು ಖರೀದಿ ಮಾಡುತ್ತಿರುವ ದಲ್ಲಾಳಿಗಳು ಕ್ವಿಂಟಾಲ್‌ಗೆ ೫ ರಿಂದ ೬ ಸಾವಿರ ಕ್ಕೆ ಕೇಳುತ್ತಿರುವುದು ರೈತರಲ್ಲಿ ಆಘಾತವನ್ನುಂಟು ಮಾಡಿದೆ. ಇನ್ನೂ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬಾಳೆ ಗಿಡಗಳಿಗೆ ಕೊಳೆ ರೋಗ ಬಂದಿದ್ದು, ಗಿಡಗಳು ಒಣಗುತ್ತಿವೆ. ಇನ್ನು ಬಾಳೆ ಹಣ್ಣುಗಳನ್ನು ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ಸಾಕಷ್ಟು ಬಾಳೆ ಹಣ್ಣುಗಳು ಗಿಡದಲ್ಲಿಯೇ ಒಣಗುತ್ತಿವೆ.
ಈ ಭಾಗದಲ್ಲಿ ಬೆಳೆದ ಬಾಳೆ ಹಣ್ಣುಗಳನ್ನು ಬೇರೆ ದೇಶಗಳಿಗೆ ಮತ್ತು ಉತ್ತರ ಭಾರತಕ್ಕೆ ಕಳಿಸಲಾಗುತ್ತಿತ್ತು. ಇದು ಈಗ ಸಂಪೂರ್ಣವಾಗಿ ನಿಂತಿದೆ. ಆದ್ದರಿಂದ ಬಾಳೆ ಹಣ್ಣುಗಳ ಬೇಡಿಕೆ ಕಡಿಮೆಯಾಗಿದೆ. ಇನ್ನೂ ಚಳಿಗಾಲದಲ್ಲಿ ಬಾಳೆ ಹಣ್ಣುಗಳನ್ನು ಬಳಸುವವರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಇದರಿಂದಲೂ ಬೆಲೆ ಕುಸಿತಗೊಳ್ಳಲಿದೆ.
ಎರಡುವರೆ ಎಕರೆ ಪ್ರದೇಶದಲ್ಲಿ ಬಾಳೆ ಹಣ್ಣುಗಳನ್ನು ಬೆಳೆದಿದ್ದೇವೆ. ಒಂದು ಸಸಿಗೆ ರೂ. ೨೫. ನಂತರ ಪ್ರತಿ ಎಕರೆಗೆ ಅಂದಾಜು ರೂ. ೧.೫೦ ಲಕ್ಷದಷ್ಟು ಖರ್ಚು ಮಾಡಿರುತ್ತೇವೆ. ಈಗ ಕೇವಲ ನಾಲ್ಕೈದು ರೂಪಾಯಿಗಳಿಗೆ ಕೇಳುತ್ತಿದ್ದಾರೆ. ಇದರಿಂದ ಬಾಳೆಹಣ್ಣುಗಳನ್ನು ಬೆಳೆದ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬಾಳೆ ಹಣ್ಣುಗಳಿಗೆ ಕೊಳೆ ರೋಗ ಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಉಚಿತವಾಗಿ ಔಷಧಿ ನೀಡುವುದರ ಜೊತೆಗೆ ಮಾರ್ಗದರ್ಶನವನ್ನು ಕೂಡಾ ಮಾಡಬೇಕಾಗಿದೆ ಎನ್ನುತ್ತಾರೆ ಜಗದಾಳದ ರೈತರಾದ ಸದಾಶಿವ ಬಂಗಿ.
ಎರಡನೆಯ ವರ್ಷದ ಮಾತ್ರ ಕೊಳೆ ರೋಗ ಬಂದಿದೆ. ರೈತರು ಸರಿಯಾಗಿ ನೀರು ಮತ್ತು ಗೊಬ್ಬರ ನೀಡದೆ ಇದ್ದರೆ ಮತ್ತು ಸಸಿಗಳನ್ನು ನಿರ್ಮಾಣ ಮಾಡುತ್ತಿರುವ ಸಂದರ್ಭದಲ್ಲಿ ಸಸಿಗಳಿಗೆ ರೋಗಗಳಿದ್ದಾಗ ಅವುಗಳ ಪರಿಣಾಮ ಈಗ ಗೊತ್ತಾಗುತ್ತವೆ. ಸರಿಯಾದ ರೀತಿಯಲ್ಲಿ ಮಣ್ಣು ಪರೀಕ್ಷೆ ಮತ್ತು ನಿರ್ಹಹಣೆಯಾದರೆ ಯಾವುದೆ ರೋಗ ಬರುವುದಿಲ್ಲ. ಈ ನಿಟ್ಟಿನಲ್ಲಿ ಗಮನ ನೀಡಲಾಗುವುದು.
-ಈರಣ್ಣ ಹೊಸಮನಿ. ಜಮಖಂಡಿ ಕೃಷಿ ಅಧಿಕಾರಿ
ಕಳೆದ ಬಾರಿ ಇದೇ ಸಮಯದಲ್ಲಿ ಕ್ವಿಂಟಾಲ್‌ಗೆ ೨೦ ರಿಂದ೨೫ ಸಾವಿರ ದರ ಇತ್ತು. ಕ್ವಿಂಟಾಲ್‌ಗೆ ೫ ರಿಂದ ೬ ಸಾವಿರಕ್ಕೆ ಕೇಳುತ್ತಿದ್ದಾರೆ. ಇದರಿಂದ ರೈತರು ಆಘಾತಗೊಂಡಿದ್ದಾರೆ ಆವರು ಹಾಕಿದ ಖರ್ಚು ಕೂಡಾ ಬರುತ್ತಿಲ್ಲ. ಸಾಲ ಮಾಡಿ ಬಾಳೆ ಹಣ್ಣುಗಳ ಬೆಳೆಯನ್ನು ಬೆಳೆದಿದ್ದಾರೆ. ಕೂಡಲೇ ಸರ್ಕಾರ ರೈತರ ಸಹಾಯಕ್ಕೆ ಬರಬೇಕು
-ಧರೆಪ್ಪ ಕಿತ್ತೂರ, ಸಾವಯುವ ಕೃಷಿಕರು ತೇರದಾಳ
