ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದ ಗಾಂಧಿ ಕುಟಿರದಲ್ಲಿ ಮೂರನೇಯ ದಿನದ ಸಂಕಲ್ಪ ಉತ್ಸವ ಉದ್ಘಾಟಿಸಿ ಮಾತನಾಡಿದ ಶಿರಳಗಿ ರಾಜಾರಾಮಾಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಅವರು ನಿತ್ಯ ಜೀವನದಲ್ಲಿ ಭಗವಂತನ ನಾಮ ಸ್ಮರಣೆ,ಆರಾಧನೆಯಿಂದ ಭದ್ರತೆ,ಶಾಂತಿ ನೆಮ್ಮದಿ ಸಿಗುತ್ತದೆ.ಸನಾತನ ಧರ್ಮ ಯಾರ ಉಕ್ತಿಯಲ್ಲ,ಒಬ್ಬ ವ್ಯಕ್ತಿ ಸನಾತನ ಧರ್ಮದ ಮೂಲ ಅಲ್ಲ ಎಂದೆಂದಿಗೂ ಉಳಿಯುವುದು ಸನಾತನ ಧರ್ಮವಾಗಿದೆ ಎಂದರು.
ಪ್ರಮೋದ ಹೆಗಡೆಯವರು ಸಾಮಾಜಿಕ ಚಿಂತನೆಯೊಂದಿಗೆ ಕಳೆದ 38 ವರ್ಷಗಳಿಂದ ಸಂಕಲ್ಪ ಉತ್ಸವವನ್ನು ನಡೆಸಿಕೊಂಡು ಬಂದಿರುವುದು ಶ್ಲಾಘನೀಯ,ನಿರಂತರವಾಗಿ ಈ ಉತ್ಸವ ನಡೆಯಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಸಾಮಾಜಿಕ ಕಾರ್ಯಕರ್ತರಾದ ಅನಂತಮೂರ್ತಿ ಹೆಗಡೆ ಮಾತನಾಡಿ ಸಂಕಲ್ಪ ಉತ್ಸವದ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ.ಸಂಕಲ್ಪ ಉತ್ಸವವು ನಮ್ಮ ರಾಜ್ಯದ ಹೆಮ್ಮೆಯ ಕಾರ್ಯಕ್ರಮ,ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ನರಸಿಂಹ ಸಾತೊಡ್ಡಿ ಹಾಗೂ ಸುಬ್ರಾಯ ಬಿದ್ರಮನೆಯವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಬೀರಣ್ಣಾ ನಾಯಕ ಮೊಗಟಾ,ಪಿ.ಜಿ.ಹೆಗಡೆ,ಪಿ.ಜಿ.ಭಟ್ಟ ವಡ್ರಮನೆ ಮುಂತಾದವರು ಇದ್ದರು.ಕಾರ್ಯಕ್ರಮದಲ್ಲಿ ಪ್ರಸಾಧಿನಿ ಭಟ್ಟ ಪ್ರಾರ್ಥಿಸಿದರು, ಡಾ.ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು,ಸಂಕಲ್ಪ ಉತ್ಸವ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
