ಸುದ್ಧಿಕನ್ನಡ ವಾರ್ತೆ
ಶಿರಸಿ: ಹೊಸ ತಲೆಮಾರಿನ ವೈದ್ಯರಿಗೆ ಮಾಹಿತಿ ತಲುಪಿಸುವ ಕನಸಿನ ಹಿನ್ನಲೆಯಲ್ಲಿ ಇಂತಹ ಜಂಟಿ ಸಮಾವೇಶ ನಡೆಸುತ್ತಿದ್ದೇವೆ. ಇದರಿಂದ ಮುಂದಿನ‌ ತಲೆಮಾರಿನ ಫಲಾನುಭವಿಯ  ಸುರಕ್ಷತೆ, ಹೊಸ ವೈದ್ಯರಿಗೆ ಮಾಹಿತಿ ಜ್ಞಾನ, ಜಾಗೃತಿ ಎರಡೂ ಸಾಧ್ಯ ಎಂದು ರಾಜ್ಯ ಎಲಬು, ಕೀಲು ವೈದ್ಯರ ಸಂಘದ ರಾಜ್ಯ ಅಧ್ಯಕ್ಷ ಡಾ.ದೀಪಕ್ ಶಿವಣ್ಣ ಹೇಳಿದರು.
ಅವರು ಶನಿವಾರದಿಂದ  ಸುಪ್ರಿಯಾ ಇಂಟರ್ ನ್ಯಾಶನಲ್ ಹೋಟೆಲ್ ನಲ್ಲಿ ಹಮ್ಮಿಕೊಂಡ  ರಾಜ್ಯ ಎಲಬು ಕೀಲು ರೋಗ ತಜ್ಞರ ಎರಡು ದಿನಗಳ ಮಹತ್ವದ ವೈದ್ಯಕೀಯ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ‌ ನೀಡಿ ಮಾತನಾಡಿದರು.
ಮೆಡಿಕಲ್‌ ಕಾಲೇಜು, ಮಹಾನಗರದಲ್ಲಿ ನಡೆಯುವ ಕಾರ್ಯಾಗಾರವನ್ನು ಸಂಘದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಶಿರಸಿಯಂಥ ಕಾಡಿನ ಊರಿನಲ್ಲೂ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಊರುಗಳಿಗೂ ಸೇವೆ ಸಿಗಬೇಕು ಎಂದು ನೂತನ ವೈದ್ಯರಿಗೂ ಹೇಳುತ್ತಿದ್ದೇವೆ. ಮಹಾ ನಗರದ ಮೆಡಿಕಲ್ ಕಾಲೇಜಿನಲ್ಲಿ ಕಲಿತು ಅಲ್ಲೆ ವೃತ್ತಿ ಮಾಡುವದು ತಪ್ಪಿಸಲು ಮಾಹಿತಿ ನೀಡುತ್ತಿದ್ದೇವೆ. ದೊಡ್ಡ ನಗರದಲ್ಲಿ ಕೊಡಬಹುದಾದ ಚಿಕಿತ್ಸೆ‌ ಸಣ್ಣ ಊರುಗಳಲ್ಲೂ ನೀಡಲಾಗುತ್ತಿದೆ ಎಂದರು. ಇಂತಹ ತರಬೇತಿಯಲ್ಲಿ ಮಾಹಿತಿ ಹಂಚಿಕೊಂಡಾಗ ವೃತ್ತಿ ಬದುಕಿನಲ್ಲಿ  ಹೊಸ ಹೊಳಹು ಸಿಗಲಿವೆ. ಇದರೊಂದಿಗೆ ಪ್ರಯತ್ನಗಳು, ಜಾಗೃತಿಗಳು ಅಗತ್ಯವಾಗಿದೆ. ಟೀಂ ವರ್ಕನಿಂದ ಸಾಧನೆ ಸಾಧ್ಯ ಎಂದರು.
 ಸಂಘದಲ್ಲಿ ಎರಡುವರೆ ಸಾವಿರ ಸದಸ್ಯ ವೈದ್ಯರು ಇದ್ದಾರೆ. ಅವರಿಗೆ ನೈತಿಕ ಬಲದ ಜೊತೆ ಆರೋಗ್ಯ ವಿಮೆಗಳ ಬಗ್ಗೂ ಸಂಘ ಯೋಚಿಸಿದೆ ಎಂದ ಅವರು,  ಪ್ರತಿ ವರ್ಷ ಸಂಘವು ಅಪಘಾತ ಸಂದರ್ಭಗಳ ನಿರ್ವಹಣೆ, ಹೆಲ್ಮೆಟ್ ಸುರಕ್ಷತೆ, ರಸ್ತೆ ಸುರಕ್ಷತೆ ಬಗ್ಗೂ ಜಾಗೃತಿ ಮೂಡಿಸುತ್ತಿದೆ ಎಂದೂ ವಿವರಿಸಿದರು.
ರಾಜ್ಯ ಸಂಘದ ಕಾರ್ಯದರ್ಶಿ ರಾಯಚೂರಿನ ಡಾ. ಹರೀಶ‌ಮೂರ್ತಿ, ಉತ್ತರ ಕನ್ನಡ ಜಿಲ್ಲಾ ಸಂಘದ ಕಾರ್ಯಕ್ರಮಕ್ಕೆ ಒಂದುವರೆ ಲಕ್ಷ ವ ರೂ. ನೆರವು ಹಸ್ತಾಂತರಿಸಿದರು. ಅತಿಥಿ, ಸಂಘದ ಮುಂದಿನ ಅಧ್ಯಕ್ಷ ಡಾ. ಅನಿಲ್‌ ಪಾಟೀಲ,  ಉತ್ತರ ಕನ್ನಡ ನೆಲದ ಸ್ವಾದವೇ ದೊಡ್ಡದು. ಶಿರಸಿಯಂಥ ನೆಲದಲ್ಲಿ ಇಂಥ ರಾಜ್ಯ ಮಟ್ಟದ ಕಾರ್ಯಾಗಾರ ನಡೆಸುತ್ತಿರುವದು  ಗಮನಾರ್ಹವಾಗಿದೆ. ಈ ಮಾಹಿತಿ ಕಾರ್ಯಾಗಾರದ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಆಯೋಜಕ‌ ಸಮಿತಿ ಅಧ್ಯಕ್ಷ‌ ಡಾ. ಮಧುಕೇಶ್ವರ ಜಿ ವಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕೈಲಾಶ್ ಪೈ, ಕೋಶಾಧಿಕಾರಿ ಡಾ. ಅಂಬರ್, ಉಪ ಕಾರ್ಯದರ್ಶಿ ಗೌತಮ್ ಶೇಟ್  ಇತರರು ಇದ್ದರು.
ಸುಮಾರು 200 ರಿಂದ 250 ವೈದ್ಯರು ರಾಜ್ಯದ ವಿವಿಧೆಡೆಯಿಂದ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಮೊಣಕಾಲು ಹಾಗೂ ತೊಡೆ ಸಂದಿಯ ಕೀಲಿನ ತೊಂದರೆಗಳ ಬಗ್ಗೆ ವಿಚಾರ ವಿಮರ್ಶೆ ನಡೆದವು.
ಈ ಬಾರಿ ಶಿರಸಿಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 68 ಮಂಡನೆಗಳು ನಡೆಯಲಿರುವುದು ವಿಶೇಷವಾಗಿದೆ. ರಾಜ್ಯದ‌ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವಡೆಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳೂ ಭಾಗವಹಿಸಿದ್ಧರು.