ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಚ್ಚುತ್ತಿರುವ ಪ್ರಕರಣ ಮುಂದುವರೆದಿದೆ. ಈ ವರ್ಷ 7 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಇವುಗಳಲ್ಲಿ 5 ಶಾಲೆಗಳು ದಕ್ಷಿಣ ಗೋವಾದಲ್ಲಿ ಮತ್ತು 2 ಶಾಲೆಗಳು ಉತ್ತರ ಗೋವಾದಲ್ಲಿವೆ. ಮುಚ್ಚಲಾಗಿರುವ 7 ಸರ್ಕಾರಿ ಶಾಲೆಗಳಲ್ಲಿ 6 ಮರಾಠಿ ಮಾಧ್ಯಮ ಶಾಲೆಗಳು ಮತ್ತು 1 ಕೊಂಕಣಿ ಮಾಧ್ಯಮ ಶಾಲೆ. ಗೋವಾದಲ್ಲಿರುವ ಹತ್ತಾರು ಕನ್ನಡ ಮಾಧ್ಯಮ ಶಾಲೆಗಳು ಕೂಡ ಬಂದ್ ಆಗಿರುವುದು ಆತಂಕದ ವಿಷಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚುತ್ತಿದೆ. ಇದರಿಂದಾಗಿ ಎಲ್ಲರೂ ಮಾತೃಭಾಷಾ ಶಿಕ್ಷಣವನ್ನು ಮರೆತು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಗೋವಾದಲ್ಲಿ ಕನ್ನಡ ಮಾಧ್ಯಮ ಶಾಲೆಗಳೂ ಕೂಡ ಬಂದ್ ಆಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಗೋವಾ ರಾಜ್ಯದಲ್ಲಿ ಸುಮಾರು 10 ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳನ್ನು ಬಂದ್ ಮಾಡಲಾಗಿದೆ.
ಈ ವರ್ಷ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆಯದ ಶಾಲೆಗಳನ್ನು ಶಿಕ್ಷಣ ನಿರ್ದೇಶಕ ಶೈಲೇಶ್ ಜಿಂಗ್ಡೆ ರವರು ಮುಚ್ಚಲು ಆದೇಶ ಹೊರಡಿಸಿದ್ದಾರೆ. ಕಾಣಕೋಣ ತಾಲೂಕಿನಲ್ಲಿ ಮೂರು ಶಾಲೆಗಳಿದ್ದರೆ, ಪೆಡ್ನೆ, ಸತ್ತರಿ, ಸಾಸಷ್ಟಿ ಮತ್ತು ಕೆಪೆ ತಾಲೂಕುಗಳಲ್ಲಿ ತಲಾ ಒಂದು ಶಾಲೆ ಮುಚ್ಚಲ್ಪಟ್ಟಿದೆ. 2022-23 ರಿಂದ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ, ವಿದ್ಯಾರ್ಥಿಗಳಿಲ್ಲದ ಕಾರಣ, ಶಾಲೆಗಳನ್ನು ಮುಚ್ಚುವ ಸಮಯ ಬಂದಿದೆ.
ಶಾಲೆಯಲ್ಲಿ ಬಹಳ ಕಡಿಮೆ ವಿದ್ಯಾರ್ಥಿಗಳಿದ್ದರೆ ಹತ್ತಿರದ ಶಾಲೆಯೊಂದಿಗೆ ಶಾಲೆಯನ್ನು ವಿಲೀನಗೊಳಿಸುವ ಪದ್ಧತಿಯನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಲಾಗಿತ್ತು. ಪ್ರಾಥಮಿಕ ಶಾಲೆಗಳನ್ನು ನಿರ್ವಹಿಸಲು ಸರ್ಕಾರ ಪ್ರತಿಜ್ಞೆ ಮಾಡಿದ್ದರೂ, ಈ ನೀತಿ ಹೆಚ್ಚು ಯಶಸ್ವಿಯಾಗಿಲ್ಲ