ಸುದ್ಧಿಕನ್ನಡ ವಾರ್ತೆ
ಆಕ್ರಮಣಕಾರಿ ಜಾತಿಯ ನಾಯಿಗಳ ಪ್ರಜನನ ಕ್ರಿಯೆ ಹಾಗೂ ಇಂತಹ ನಾಯಿಗಳನ್ನು ಸಾಕಲು ಗೋವಾ ರಾಜ್ಯದಲ್ಲಿ ಸಂಪೂರ್ಣ ನಿರ್ಬಂಧ ಹೇರುವ ಮಾರ್ಗ ಇದೀಗ ಸರಾಗವಾದಂತಾಗಿದೆ. ಗೋವಾ ವಿಧಾನಸಭಾ ಅಧಿವೇಶನದಲ್ಲಿ “ಗೋವಾ ಪ್ರಾಣಿ ಪ್ರಜನನ ಹಾಗೂ ಸಾಕುವ ನಿಯಮ ವಿಧೇಯಕ-2025 ಸಮ್ಮತಿಗೊಳಿಸಲಾಗಿದೆ. ಈ ವಿಧೇಯಕದಿಂದಾಗಿ ಗೋವಾ ರಾಜ್ಯದಲ್ಲಿ ರೊಟವಿಲರ್ ಹಾಗೂ ಫಿಟ್ ಬುಲ್ ನಂತಹ ಆಕ್ರಮಣಕಾರಿ ನಾಯಿಗಳನ್ನು ಸಾಕಲು ಸಂಪೂರ್ಣ ನಿರ್ಬಂಧ ಹೇರಲು ಸಾಧ್ಯವಾಗಲಿದೆ.
ಈ ವಿಧೇಯಕದಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಜಾತಿಯ ಪ್ರಾಣಿಗಳನ್ನು ಆಕ್ರಮಣಕಾರಿ ಪ್ರಾಣಿ ಎಂದು ಘೋಷಿಸುವ ಅಧಿಕಾರ ನೀಡುತ್ತದೆ. ಹೀಗೆ ಘೋಷಣೆ ಮಾಡಿದ ನಂತರ ಆ ಜಾತಿಯ ಪ್ರಾಣಿಗಳನ್ನು ಸಾಕುವುದು ಮತ್ತು ಪ್ರಜನನಕ್ಕೆ ಅಥವಾ ಗೋವಾ ರಾಜ್ಯಕ್ಕೆ ಇಂತಹ ಪ್ರಾಣಿಗಳನ್ನು ತರಲು ಸಂಪೂರ್ಣ ನಿರ್ಬಂಧ ಹೇರಲಾಗುತ್ತದೆ.
ಹೀಗೆ ಆಕ್ರಮಣಕಾರಿ ಪ್ರಾಣಿ ಎಂದು ಘೋಷಣೆಯಾದ ನಂತರ ಒಂದು ವೇಳೆ ಇಂತಹ ಪ್ರಾಣಿಗಳನ್ನು ಸಾಕಿದ್ದಲ್ಲಿ ಅದರಿಂದ ಯಾರದ್ದಾದರೂ ಜೀವಕ್ಕೆ ಹಾನಿಯಾದಲ್ಲಿ ಅದರ ಸಂಪೂರ್ಣ ಜವಾಬ್ದಾರಿ ಅದರ ಮಾಲೀಕನದ್ದೇ ಆಗಿರುತ್ತದೆ. ಇಂತಹ ನಾಯಿ ಧಾಳಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಸಂಬಂಧಿಕರು ನಾಯಿ ಮಾಲೀಕನಿಂದ ಪರಿಹಾರ ಕೇಳಬಹುದಾಗಿದೆ. ಈ ವಿಧೇಯಕವನ್ನು ಉಲ್ಲಂಘಿಸಿ ಇಂತಹ ಪ್ರಾಣಿಗಳನ್ನು ಸಾಕಿದ್ದೇ ಆದಲ್ಲಿ ಅಂತಹ ವ್ಯಕ್ತಿಗೆ 15 ದಿನದಿಂದ 3 ತಿಂಗಳವರೆಗೆ ಸಾದಾ ಶಿಕ್ಷೆ, 50,000 ರೂ ದಂಡ ವಿಧಿಸುವ ಅಧಿಕಾರವೂ ಸರ್ಕಾರಕ್ಕೆ ಇರಲಿದೆ.
ಈ ವಿಧೇಯಕಕ್ಕೆ ಗೋವಾ ವಿಧಾನಸಭೆಯಲ್ಲಿ 6 ಜನ ಪ್ರತಿಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿದರು. ಆದರೆ ಸಂಖ್ಯಾಬಲದ ಅಭಾವದಿಂದಾಗಿ ಅವರ ವಿರೋಧವು ಯಶಸ್ವಿಯಾಗಿಲ್ಲ. ರೊಟವಿಲರ್ ಮತ್ತು ಫಿಟ್ ಬುಲ್ ನಾಯಿಗಳು ಮನುಷ್ಯನ ಮೇಲೆ ಧಾಳಿ ನಡೆಸಿದ ಹಲವು ಘಟನೆಗಳು ನಡೆದ ನಂತರ ಈ ವಿಧೇಯಕದ ಅಗತ್ಯ ಅನಿವಾರ್ಯವಾಗಿತ್ತು. ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನೆಯ ಸಮೀಪದಲ್ಲಿಯೇ ಒಂದು ರೊಟವಿಲರ್ ಧಾಳಿ ನಡೆಸಿದ್ದರಿಂದ ಇಬ್ಬರು ಮಕ್ಕಳು ಬಂಘೀರ ಗಾಯಗೊಂಡ ಘಟನೆ ನಡೆದಿತ್ತು. ಈ ನಂತರದಲ್ಲಿ ಇಂತಹ ನಾಯಿಗಳಿಗೆ ಗೋವಾದಲ್ಲಿ ನಿರ್ಬಂಧ ಹೇರಬೇಕೆಂಬ ಬೇಡಿಕೆ ಹೆಚ್ಚಾಗಿ ಕೇಳಿ ಬಂದಿತ್ತು.