ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾ ರಾಜ್ಯ ಸಚಿವ ಸಂಪುಟದಿಂದ ಎರಡರಿಂದ ಮೂರು ಜನ ಸಚಿವರನ್ನು ಕೈ ಬಿಡುವುದು, ವಿವಿಧ ಖಾತೆಯ ಸಚಿವರ ಖಾತೆ ಬದಲಾವಣೆ ಅಥವಾ ಸಂಪುಟ ಪುನರ್ರಚನೆಯಂತಹ ವಿಷಯಗಳಿಗೆ ಬ್ರೇಕ್ ಬಿದ್ದಿರುವುದು ಬೆಳಕಿಗೆ ಬಂದಿದೆ. ಸಚಿವ ವಿಶ್ವಜಿತ್ ರಾಣೆ ರವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಭೇಟಿ ಮಾಡಿದ್ದು, ಗೋವಾದ ಜೊತೆಗೆ ಸಿಂಧುದುರ್ಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾ ರಾಜ್ಯ ಸಚಿವ ವಿಶ್ವಜಿತ್ ರಾಣೆ ರವರು ಈ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ, ಆದರೆ ಕೇಂದ್ರ ಗೃಹ ಸಚಿವ ಶಾ ರವರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಂತರ ಸಚಿವ ರಾಣೆ ರವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ರವರನ್ನು ಭೇಟಿಯಾದರು. ಅಮಿತ್ ಶಾ ರವರನ್ನು ಭೇಟಿ ಮಾಡಿ ಗೋವಾದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಗೋವಾದಲ್ಲಿ ಉಧ್ಭವಿಸಿದ ಕೆಲ ವಿವಾದಗಳ ಬಗ್ಗೆಯೂ ಶಾ ಮಾಹಿತಿ ಪಡೆದಿದ್ದಾರೆ. ವಿಶ್ವಜಿತ್ ರಾಣೆ ಬಹುಕಾಲದಿಂದ ಅಮಿತ್ ಶಾ ಮತ್ತು ಬಿಎಲ್ ಸಂತೋಷ ರವರ ಸಂಪರ್ಕದಲ್ಲಿದ್ದಾರೆ. ಕೆಲವೊಮ್ಮೆ ಕರ್ನಾಟಕದಲ್ಲಿ ಕೆಲವೊಮ್ಮೆ ಇಂದೋರ್‍ನಲ್ಲಿ ಕೆಲವೊಮ್ಮೆ ಹಿಮಾಚಲ ಪ್ರದೇಶದಲ್ಲಿ ಚುನಾವಣೆಯ ಪ್ರಚಾರದ ಜವಾಬ್ದಾರಿಯನ್ನು ಬಿಜೆಪಿಯ ಕೇಂದ್ರ ನಾಯಕರು ರಾಣೆಗೆ ನೀಡಿದ್ದಾರೆ. ಈ ಬಾರಿ ಸಿಂಧುದುರ್ಗದ ಎಂಟು ಕ್ಷೇತ್ರದ ಜವಾಬ್ದಾರಿಯನ್ನೂ ರಾಣೆಗೆ ನೀಡಲಾಗಿದೆ. ಈ ಬಗ್ಗೆ ಶಾ ರವರಿಗೆ ರಾಣೆ ವರದಿ ಸಲ್ಲಿಸಿದ್ದಾರೆ. ಗೋವಾದಲ್ಲಿ ವಿಶ್ವಜಿತ್ ರಾಣೆ ರವರ ಟಿಸಿಪಿ ಖಾತೆಯನ್ನು ತೆಗೆದುಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು, ಆದರೆ ಆ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ಬಿಜೆಪಿಯ ಕೆಲ ನಾಯಕರು ಸಚಿವ ರಾಣೆಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.