ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಬುಧವಾರದಿಂದ ಎಡಬಿಡದೆಯೇ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಗೆ ಹಲವೆಡೆ ಮನೆಯ ಮೇಲೆ ಮರ ಬಿದ್ದಿರುವ ವರದಿಯಾಗಿದೆ. ಗೋವಾ ರಾಜಧಾನಿ ಪಣಜಿ ಸಮೀಪದ ರಾಯಬಂದರನಲ್ಲಿನ ಶ್ರೀ ರಾಮ ಮಂದಿರದ ಎದುರು ಮನೆಗೆ ಇದ್ದ ತಡೆಗೋಡೆ ಕುಸಿದಿದ್ದರಿಂದ ಈ ಮನೆಯ ಸ್ಥಿತಿ ಕೂಡ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಿದೆ. ತಡೆಗೋಡೆ ಕುಸಿತದ ಸಂದರ್ಭದಲ್ಲಿ ಯಾವುದೇ ವಾಹನಗಳ ಓಡಾಟವಿಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾಯಬಂದರನಿಂದ ಚಿಂಬಲ್ ಭಾಗಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ತಡೆಗೋಡೆ ಕುಸಿದಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಸ್ಥಳಕ್ಕೆ ಸಾಂತಕ್ರೂಜ್ ಕ್ಷೇತ್ರದ ಶಾಸಕ ರುಢಾಲ್ಫ ಫರ್ನಾಂಡೀಸ್ ಭೇಟಿ ನೀಡಿ ಪರಿಶಿಲಿಸಿ ಅಗತ್ಯ ನೆರವಿನ ಭರವಸೆ ನೀಡಿದರು. ಕೆಲ ಗಂಟೆಗಳಲ್ಲಿ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣು ಮತ್ತು ಕಲ್ಲಿನ ರಾಶಿಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ರಾಯಬಂದರ ಶ್ರೀ ರಾಮ ಮಂದಿರದ ಎದುರು ಕೂಡಲೇ ತಡೆಗೋಡೆ ನಿರ್ಮಾಣದ ಅಗತ್ಯವಿದೆ. ತಡೆಗೋಡೆ ಬಿದ್ದಿದ್ದರಿಂದ ಅಲ್ಲಿರುವ ಮನೆ ಕೂಡ ಬೀಳುವ ಹಂತದಲ್ಲಿದ್ದು ಈ ಮಾರ್ಗದಲ್ಲಿ ಓಡಾಡುವ ಜನರು ಕೂಡ ಆತಂಕದಲ್ಲಿಯೇ ಓಡಾಟ ನಡೆಸುವಂತಾಗಿದೆ.
ಮಾರುಕಟ್ಟೆಗೆ ನುಗ್ಗಿದ ನೀರು...
ಗೋವಾದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪಣಜಿ ಮಾರುಕಟ್ಟೆಮ ಮಡಗಾಂವ ಮಾರುಕಟ್ಟೆ, ಮಾಪ್ಸಾ ಮಾರುಕಟ್ಟೆ ಪ್ರದೇಶದಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.