ಸುದ್ಧಿಕನ್ನಡ ವಾರ್ತೆ
 ಬೆಳಗಾವಿ-ಚೋರ್ಲಾ (Belagavi-ChorlA)  ಗೋವಾ ಹೆದ್ದಾರಿಯ ಕುಸಮಳಿ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರಿಂದ ಜುಲೈ 1 ರಿಂದ ವಾಹನ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಸದ್ಯ ಈ ಸೇತುವೆಯ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಭಾರಿ ವಾಹನಗಳಿಗೆ ಸದ್ಯ ಈ ಸೇತುವೆಯ ಮೇಲೆ ಓಡಾಟಕ್ಕೆ ನಿರ್ಬಂಧ (Restriction) ಹೇರಲಾಗಿದೆ. ಭಾರಿ ವಾಹನಗಳ ಓಡಾಟಕ್ಕೆ ಖಾನಾಪುರ ಬೆಳಗಾವಿ ಬದಲಿ ಮಾರ್ಗದಲ್ಲಿ ಓಡಾಟಕ್ಕೆ ಸೂಚನೆ ನೀಡಲಾಗಿದೆ. ಮಲಪ್ರಭಾ (Malaprabha)  ನದಿಯ ಈ ಸೇತುವೆಯ ಕಾಮಗಾರಿ ಇನ್ನೂ ಬಾಕಿ ಇದ್ದು, ಪೂರ್ಣಗೊಂಡ ನಂತರ ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ಲಭಿಸಲಿದೆ.

ಬೆಳಗಾವಿ-ಗೋವಾ (Belagavi-Goa) ರಸ್ತೆಯಲ್ಲಿರುವ ಕುಸಮಳಿಯಲ್ಲಿರುವ ಮಲಪ್ರಭಾ ನದಿಗೆ ನಿರ್ಮಿಸಲಾಗಿದ್ದ ಬ್ರಿಟೀಷ ಕಾಲದ ಸೇತುವೆ ಅಜೀರ್ಣಾವಸ್ಥೆಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಬ್ರಿಟೀಷ ಕಾಲದ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಗೊಳಿಸಲಾಗಿದೆ.

ಈ ಸೇತುವೆಯು 10 ಮೀಟರ್ ಉದ್ಧ ಹಾಗೂ ಐದೂವರೆ ಮೀಟರ್ ಅಗಲವಿದೆ. ಈ ಸೇತುವೆಯ ನಿರ್ಮಾಣ ಸಂದರ್ಭದಲ್ಲಿ ಪಕ್ಕದಲ್ಲಿ ವಾಹನ ಸಂಚಾರಕ್ಕೆ ನದಿಗೆ 10 ಪೈಕ್ ಹಾಕಿ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಹದಿನೈದು ದಿನಗಳ ಹಿಂದೆ ಭಾರಿ ಮಳೆಗೆ ಈ ತಾತ್ಪೂರ್ತಿಕ ಮಣ್ಣಿನ ಸೇತುವೆ ಕೊಚ್ಚಿಹೋಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಕಳೆದ ಕೆಲದಿನಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಇದೀಗ ಈ ಮುಖ್ಯ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದರಿಂದ ಬೆಳಗಾವಿ- ಗೋವಾ ವಾಹನ ಸಂಚಾರ ಸುಗಮಗೊಂಡಂತಾಗಿದೆ.