ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ – ಗ್ರಾಮದಲ್ಲಿ ಶಾಲೆಯೊಂದು ಇದ್ದರೆ ನೂರಾರು
ದೇವಸ್ಥಾನಕ್ಕೆ ಅದು ಸಮ’ ಎಂಬ ಮಾತುಗಳು ಈಗ ಶಿಕ್ಷಣ ಕ್ಷೇತ್ರದಲ್ಲಿ ಮರೆಯಾಗುತ್ತಾ ಬರುತ್ತಿದೆ. ಸರ್ಕಾರಿ ಶಾಲೆ ಉಳಿಸಿ ಎಂದು ಬೊಬ್ಬೆ ಇಡುವ ರಾಜಕಾರಣಿಗಳು ತಾವೇ ಖಾಸಗಿ ಶಾಲೆ ಮಾಡಿಕೊಂಡು ಸರ್ಕಾರಿ ಶಾಲೆಗೆ ಬೀಗ ಹಾಕುವ ಪರಿಸ್ಥಿತಿಗೆ ತಂದಿದ್ದಾರೆ.

ಹೌದು ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಗ್ರಾಮದ ಸರ್ಕಾರಿ ಶಾಲೆಯನ್ನು ಈ ವರ್ಷದಿಂದ ಮುಚ್ಚಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ ತಾಲೂಕಿನಲ್ಲಿ ಕಳೆದ 20 ವರ್ಷದಿಂದ ಈಚೆಗೆ ಸುಮಾರು 70ಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಮಕ್ಕಳ ಸೇರ್ಪಡೆ ಸಂಖ್ಯೆ ಶೂನ್ಯದ ಹಿನ್ನೆಲೆಯಲ್ಲಿ ಶಾಲೆ ಮುಚ್ಚುವ ನಿರ್ಧಾರ ಮಾಡಲಾಗಿದೆ. ಆಲ್ಮನೆ, ಶೆಟ್ಟಿಗಳಕೊಪ್ಪ, ಮರಗಳಲೆ, ಬೆಕ್ಷೆಕೆಂಜಿ ಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ವರ್ಷ ಮುಚ್ಚಲು ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಹೀಗೆ ಆದರೆ ಸರ್ಕಾರಿ ಶಾಲೆ ಉಳಿಯುವುದು ಹೇಗೆ ಎಂಬುದೇ ಪ್ರೆಶ್ನೆ.

ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಉಚಿತ ಶಿಕ್ಷಣ
ಸೇರಿ ಎಲ್ಲಾ ರೀತಿಯ ಸೌಕರ್ಯವನ್ನು ಸರ್ಕಾರ ಒದಗಿಸುತ್ತಿದೆ. ಶಾಲೆಯಲ್ಲಿ ಆಟದ ಮೈದಾನ, ಬಿಸಿಯೂಟ ಅಡುಗೆ ಕಟ್ಟಡ, ಶೌಚಾಲಯ, ಕುಡಿಯುವ ನೀರು ಇತರೆ ಮೂಲ ಸೌಕರ್ಯ ಪಡೆದಿವೆ. ಆದರೂ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ರಾಜಕಾರಣ ಎಂದರೂ ತಪ್ಪಾಗುವುದಿಲ್ಲ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಹಾಗೆ ಇತ್ತ ಸರ್ಕಾರಿ ಶಾಲೆ ಉಳಿಸಿ ಎನ್ನುವುದು ಅತ್ತ ತಾವೇ ಖಾಸಗಿ ಶಾಲೆ ಕಟ್ಟುವುದು.
ಹೀಗೆ ಆದಾಗ ಸರ್ಕಾರಿ ಶಾಲೆಗೆ ಮಕ್ಕಳು ಬರುವುದಾದರೂ ಹೇಗೆ? ತಿಳಿದಿಲ್ಲ.

2024-25ನೇ ಸಾಲಿನ ಎಸ್ಎಸ್ಎಲ್‌ ಸಿ ಪರೀಕ್ಷಾ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ದೊರಕಿತ್ತು. ಅತ್ಯುನ್ನತ ಫಲಿತಾಂಶದ ನಡುವೆ ತಾಲೂಕಿನಲ್ಲಿ ಸರ್ಕಾರಿ ಶಾಲೆ ಮುಚ್ಚುವ ಸಂಖ್ಯೆ
ಹೆಚ್ಚುತ್ತಿದ್ದು, ಮಕ್ಕಳ ಸೇರ್ಪಡೆ ಸಂಖ್ಯೆ ಕುಸಿಯುತ್ತಿದೆ.
ಬಡ, ಮಧ್ಯಮ ವರ್ಗಗಳ ಕುಟುಂಬದ ಮಕ್ಕಳು ಸರ್ಕಾರಿ ಶಾಲೆ ಆಶ್ರಯಿಸಿದರೆ, ಆರ್ಥಿಕ ಶಕ್ತಿಯ ಕುಟುಂಬಗಳ ಮಕ್ಕಳು ಖಾಸಗಿ ಶಾಲೆ ಆವಲಂಬಿಸುತ್ತಿದ್ದಾರೆ.

ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಬಹು ಮುಖ್ಯ ತೀರ್ಮಾನ ತೆಗೆದುಕೊಳ್ಳಬೇಕಿದೆ. ಅದರಲ್ಲೂ ಕನಿಷ್ಠ ಪಕ್ಷ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಕೊಡಲಾಗುವುದು ಎಂಬ ದಿಟ್ಟ ನಿರ್ಧಾರ ಸರ್ಕಾರ ತೆಗೆದುಕೊಂಡಾಗ ಮಾತ್ರ ಸರ್ಕಾರಿ ಶಾಲೆ ಉಳಿಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದೊಂದು ದಿನ ಇಲ್ಲಿ ಸರ್ಕಾರಿ ಶಾಲೆ ಇತ್ತು ಎಂಬ ಮಾತು ಕೇಳಿದರೂ ಆಶ್ಚರ್ಯವಿಲ್ಲ.