ಸುದ್ದಿಕನ್ನಡ ವಾರ್ತೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿರುವುದು ವರದಿಯಾಗಿದೆ. ಇದರಿಂದ ರಾಜ್ಯದ ಜನ ಆತಂಕಕ್ಕೆ ಒಳಗಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲೇ 32 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿ, ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಇತ್ತ ಕೋಡಿಮಠದ ಕೋಡಿಶ್ರೀಗಳು ಈ ಮಹಾಮಾರಿ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈ ಸಂವತ್ಸರದಲ್ಲಿ ಒಂದು ಹೊಸ ರೋಗ ಬರುವ ಸೂಚನೆ ಇದೆ. ಇದು ಐದು ವರ್ಷಗಳವರೆಗೆ ಇರುತ್ತೆ. ಈ ರೋಗ ಮತ್ತೊಂದು ರೂಪವನ್ನು ತಾಳಲಿದೆ. ಈ ಬಾರಿ ವಾಯು ರೂಪದಲ್ಲಿ ಈ ರೋಗ ಬರುತ್ತೆ. ವಾಯುಮಾಲಿನ್ಯ ಆಗಿದೆ. ಭೂಮಾಲಿನ್ಯ ಆಗಿದೆ, ಜಲಮಾಲಿನ್ಯವೂ ಆಗಿದೆ. ಯಾವುದೂ ನಮಗೆ ಒಳ್ಳೆ ರೀತಿಯಲ್ಲಿ ಸಿಕ್ತಿಲ್ಲ. ಹಾಗಾಗಿ ಜನರ ತಮ್ಮ ಹುಷಾರಿನಲ್ಲಿರುವುದು ಒಳ್ಳೆಯದು ಎಂದಿದ್ದಾರೆ.

ಈ ಬಾರಿ ಬರುವಂತಹ ಖಾಯಿಲೆ ಬಹಳ ಘೋರವಾಗಿದೆ. ವಾಯುರೂಪದಲ್ಲಿ ಕಫ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಲಕ್ಷ್ಮಣಗಳಿವೆ. ಈ ಗಂಡಾಂತರ ಇಡೀ ಲೋಕಕ್ಕೇ ಇದೆ. ಇದರ ಆಯಸ್ಸು ಐದು ವರ್ಷ ಇರಬಹುದು. ಮಧ್ಯದಲ್ಲಿ ಕಡಿಮೆಯಾಗಿ ಮತ್ತೆ ಹೆಚ್ಚಾಗಬಹುದು ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.

ಆರೋಗ್ಯ ಸಚಿವರು ಹೇಳಿದ್ದೇನು?
ಈ ವರ್ಷ ನಾವು ಕರ್ನಾಟಕದಲ್ಲಿ ಇದುವರೆಗೆ 35 ಕೋವಿಡ್ ಪ್ರಕರಣಗಳನ್ನು ಕಂಡಿದ್ದೇವೆ. ಅದರಲ್ಲಿ 32 ಕೇಸ್ ಬೆಂಗಳೂರಿನಲ್ಲಿ ವರದಿಯಾಗಿವೆ. ಕಳೆದ 20 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ. ಆದರೆ ಯಾವುದೇ ಗಂಭೀರ ಪರಿಸ್ಥಿತಿ ವರದಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಕೋವಿಡ್-19 ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಕೋವಿಡ್ ಬಗ್ಗೆ ಎಚ್ಚರವಿರಲಿ…!
ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡುವಾಗ ಗರ್ಭಿಣಿಯರು, ಮಕ್ಕಳು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಫೇಸ್ ಮಾಸ್ಕ್ ಧರಿಸುವುದು ಸೂಕ್ತ. ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಬಳಸುವಂತಹ ಕ್ರಮಗಳನ್ನು ಸಹ ಅನುಸರಿಸಬಹುದು. ತೀವ್ರ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರು ಸಕಾಲಿಕ ಚಿಕಿತ್ಸೆಗಾಗಿ ಮತ್ತು ಕೋವಿಡ್‍ನ ಮತ್ತಷ್ಟು ಹರಡುವಿಕೆಯನ್ನು ಪರಿಶೀಲಿಸಲು ಕೋವಿಡ್ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. ಕಳೆದ 20 ದಿನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆಯನ್ನು ಗಮನಿಸಲಾಗಿದ್ದು, ಈವರೆಗೆ ಯಾವುದೇ ಕೋವಿಡ್ ಮರಣಗಳು ವರದಿಯಾಗಿರುವುದಿಲ್ಲ. ಪ್ರಸ್ತುತ ಕೋವಿಡ್ 19 ಪರಿಸ್ಥಿತಿಯು ಹತೋಟಿಯಲ್ಲಿದ್ದು ಸಾರ್ವಜನಿಕರು ಅನಗತ್ಯ ಭಯಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯ ಎಂದಿದ್ದಾರೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳಿಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದು, ನಾಳೆಯಿಂದಲೇ ಕೋವಿಡ್ ಪರೀಕ್ಷೆ ಆರಂಭಿಸುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಮತ್ತೆ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ.