ಸುದ್ದಿಕನ್ನಡ ವಾರ್ತೆ
Goa : ಗೋವಾದಲ್ಲಿ ಮೇ 20 ರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಆರಂಭಗೊಂಡಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಗೋವಾ ರಾಜಧಾನಿ ಪಣಜಿ ಹಾಗೂ ಗ್ರಾಮೀಣ ಭಾಗದಲ್ಲಂತೂ ಭಾರಿ ಮಳೆಯಾಗುತ್ತಿದೆ. ಗೋವಾ ರಾಜ್ಯದಲ್ಲಿ ಯಲ್ಲೊ ಅಲರ್ಟ ಜಾರಿಗೊಳಿಸಲಾಗಿದೆ.

ಕಳೆದ ಸುಮಾರು ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತಾದರೂ ಇದ್ದಕ್ಕಿದ್ದಂತೆಯೇ ಮಳೆ ಆರಂಭಗೊಂಡಿರುವುದರಿಂದ ಜನತೆ ಅದರಲ್ಲೂ ರೈತರು ಪೂರ್ವ ಸಿದ್ಧತೆಯಿಲ್ಲದೆಯೇ ಕಂಗಾಲಾಗಿದ್ದಾರೆ. ಮೇ 20 ಮತ್ತು 21 ರಂದು ಆರೆಂಜ್ ಅಲರ್ಟ ಹಾಗೂ 22 ರಿಂದ 26 ರ ವರೆಗೆ ಯಲ್ಲೊ ಅಲರ್ಟ ಘೋಷಿಸಲಾಗಿದೆ, ಭಾರಿ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ಭಾರಿ ಗಾಳಿ ಮಳೆಗೆ ಮರಗಳು ಬೀಳುವ ಸಾಧ್ಯತೆಯಿರುವುದರಿಂದ ಜನತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ವಿದ್ಯುತ್ ಕಂಬಗಳು, ಹಳೇಯ ಕಟ್ಟಡ, ನೀರು ನಿಲ್ಲುವಂತಹ ಸ್ಥಳಗಳಿಂದ ದೂರ ಉಳಿಯಬೇಕು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಹಲವೆಡೆ ನೀರು ತುಂಬಿ ಅವಾಂತರ…?
ರಾಜ್ಯದಲ್ಲಿ ಎಡಬಿಡದೆಯೇ ಸುರಿಯುತ್ತಿರುವ ಮಳೆಗೆ ಪಣಜಿ ಮಾರುಕಟ್ಟೆಯ ಕೆಲ ಸ್ಥಳಗಳಲ್ಲಿ ನೀರು ತುಂಬಿ ಅಂಗಡಿಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.