ಸುದ್ದಿಕನ್ನಡ ವಾರ್ತೆ
Goa : ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ, ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿಯ ಆಗ್ನೇಯ ಭಾಗ ಮತ್ತು ನಿಕೋಬಾರ್ ದ್ವೀಪಗಳಿಗೆ ಮಾನ್ಸೂನ್ ಆಗಮಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಭವಿಷ್ಯ ನಿಜವಾಗಿದೆ. ಅನುಕೂಲಕರ ಪರಿಸ್ಥಿತಿಗಳು ಮುಂದುವರಿದರೆ, ಮುಂದಿನ ನಾಲ್ಕು ದಿನಗಳಲ್ಲಿ ಮಾನ್ಸೂನ್ ಮುಂದುವರಿಯುವ ಸಾಧ್ಯತೆಯಿದೆ.

ಮಂಗಳವಾರ, ಪಣಜಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 27.2 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮುಗಾರ್ಂವ್‍ನಲ್ಲಿ ಗರಿಷ್ಠ ತಾಪಮಾನ 34.8 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 25.8 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮುಂದಿನ ಆರು ದಿನಗಳವರೆಗೆ ಗೋವಾ ರಾಜ್ಯದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ನಡುವೆ ಉಳಿಯುವ ಸಾಧ್ಯತೆಯಿದೆ. ಮಂಗಳವಾರ ಪಣಜಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಲಘು ಮಳೆಯಾಗಿದೆ. ರಾಜ್ಯದಲ್ಲಿ 24 ಗಂಟೆಗಳಲ್ಲಿ 3.8 ಮಿಲಿಮೀಟರ್ ಮಳೆಯಾಗಿದೆ. ಮುಗಾರ್ಂವ್‍ನಲ್ಲಿ 29 ಮಿ.ಮೀ., ದಾಬೋಲಿಯಲ್ಲಿ 19 ಮಿ.ಮೀ. ಮತ್ತು ಸಾಂಗೆಯಲ್ಲಿ 2 ಮಿ.ಮೀ. ಮಳೆ ದಾಖಲಾಗಿದೆ. ಮಾರ್ಚ್ 1 ರಿಂದ ಮೇ 14 ರವರೆಗೆ ರಾಜ್ಯದಲ್ಲಿ ಸರಾಸರಿ 17.7 ಮಿ.ಮೀ ಮಳೆಯಾಗಿದೆ.

ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ: ‘ಯೆಲ್ಲೋ ಅಲರ್ಟ್’
ಮೇ 14 ರಿಂದ 16 ರವರೆಗೆ ಗೋವಾ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ, ಮೂರು ದಿನಗಳವರೆಗೆ ಮಳೆಯ ‘ ಯಲ್ಲೊ ಅಲರ್ಟ ಎಚ್ಚರಿಕೆ’ ನೀಡಲಾಗಿದೆ. ಮೇ 17 ರಿಂದ 19 ರವರೆಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಮೇ 1 ಅಥವಾ 2 ರಂದು ಗೋವಾಕ್ಕೆ ಮಾನ್ಸೂನ್ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.