ಸುದ್ದಿಕನ್ನಡ ವಾರ್ತೆ
Goa : ಭಾರತ-ಪಾಕಿಸ್ತಾನ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿ ನಾಗರೀಕರ ರಕ್ಷಣೆಗಾಗಿ ಆಪತ್ಕಾಲೀನ ಪರಿಸ್ಥಿತಿ ಎದುರಿಸಲು ಸರ್ಕಾರ ಪೂರ್ವ ಸಿದ್ಧತಾ ಕಾರ್ಯ ಕೈಗೊಂಡಿದೆ. ಸಂಭಾವ್ಯ ಪರಿಸ್ಥಿತಿಗೆ ಬ್ಲ್ಯಾಕ್ ಔಟ್ ಪ್ರೊಟೊಕಾಲ್, ಹಾಗೂ ಆಪತ್ಕಾಲೀನ ನಾಗರೀಕ ಸಾರಿಗೆ ಸೇವೆ, ಆಪತ್ಕಾಲೀನ ಕೇಂದ್ರ, ಹಾಗೂ ಸಾರ್ವಜನಿಕ ರಕ್ಷಣೆಗಾಗಿ ವಿಶೇಷ ಮಾರ್ಗದರ್ಶಕ ತತ್ವವನ್ನು ಜಾರಿಗೊಳಿಸಲಾಗಿದೆ.

ಯಾವುದೇ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜನರು ಗಾಬರಿಗೊಳಗಾಗದೆಯೇ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ವಾಯು ವಾರ್ಗದ ಹಲ್ಲೆಯ ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಏಕಸಮಾನ ಸೈರನ್ ಹೊರಡಿಸಲಿದೆ. ಎರಡು ನಿಮಿಷದ ಈ ಸೈರನ್ ವಾಯು ಮಾರ್ಗದ ಹಲ್ಲೆಯ ಮುನ್ಸೂಚನೆಯನ್ನು ನೀಡಲಿದೆ. ಈ ನಂತರದಲ್ಲಿ ಎರಡು ನಿಮಿಷ ಮೊಳಗಲಿರುವ ಸೈರನ್ ಈ ಆತಂಕ ಸ್ಥಿತಿ ಮುಕ್ತಾಯಗೊಂಡಿದೆ ಎಂಬ ಸಂಕೇತವನ್ನು ನೀಡಲಿದೆ.

ಇಂತಹ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜನರು ಸರ್ಕಾರಿ ಆಶ್ರಯಸ್ಥಾನಗಳಿಗೆ ಸ್ಥಳಾಂತರಗೊಳ್ಳಬೇಕು. ಅಥವಾ ತಮ್ಮ ಮನೆಗಳಲ್ಲಿ ಕಿಡಕಿ ಬಂದ್ ಮಾಡಿಕೊಂಡು ಉಳಿಯಬೇಕು. ಇಂತಹ ಸಂದರ್ಭದಲ್ಲಿ ದೂರವಾಣಿ ಅಥವಾ ಇಂಟರ್ ನೆಟ್ ಗಳನ್ನು ಅನಗತ್ಯವಾಗಿ ಬಳಕೆ ಮಾಡಬಾರದು. ತುರ್ತು ಪರಿಸ್ಥಿತಿ ಸೈರನ್ ಮೊಳಗಿದಾಗ ಎಲ್ಲ ಲೈಟ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಯೊಬ್ಬ ವಾಹನ ಸವಾರರೂ ವಾಹನಗಳ ಲೈಟ್ ಬಂದ್ ಮಾಡಿ ಸುರಕ್ಷಿತ ಸ್ಥಳಗಳಲ್ಲಿ ನಿಂತುಕೊಳ್ಳಬೇಕು. ಅನಗತ್ಯ ಪ್ರವಾಸವನ್ನು ನಿಲ್ಲಿಸಬೇಕು ಎಂದು ಸರ್ಕಾರ ಸೂಚನೆ ಹೊರಡಿಸಿದೆ. ಬಿಳಿಯ ಲೈಟ್ ಪ್ರದರ್ಶನದ ನಂತರ ಆಲ್ ಕ್ಲೀಯರ್ ಎಂಬ ಸಿಗ್ನಲ್ ನೀಡಲಿದೆ, ಹೀಗೆ ಅಗತ್ಯ ಮಾರ್ಗಸೂಚಿಯನ್ನು ತುರ್ತು ಪರಿಸ್ಥಿತಿಯಲ್ಲಿ ಪಾಲಿಸುವಂತೆ ಸೂಚಿಸಲಾಗಿದೆ.