ಸುದ್ದಿಕನ್ನಡ ವಾರ್ತೆ
Goa : ಪಹಲ್ಗಾಮ್ ಭೀಕರ ಘಟನೆಯ ನಂತರ ಗೋವಾ ರಾಜ್ಯದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪೆÇಲೀಸ್ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ. ಹಳೆಯ ಗೋವಾ ಪೆÇಲೀಸರು ಚಿಂಬಲ್, ಮೆರ್ಶಿ ಮತ್ತು ಸಾಂತಾಕ್ರೂಜ್ ಪ್ರದೇಶಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 252 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ 21 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನದಲ್ಲಿಡಲಾಗಿದೆ ಮತ್ತು 12 ಜನರನ್ನು ಇತರ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶುಕ್ರವಾರ ರಾತ್ರಿ ಪರ್ವರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಾಲ್ ಡಿ ಗೋವಾದಲ್ಲಿ, ಪೆÇಲೀಸ್ ಇನ್ಸ್‍ಪೆಕ್ಟರ್ ಮಾಲ್ ನ ಭದ್ರತಾ ಸಿಬ್ಬಂದಿಗೆ ಎಲ್ಲಾ ಭದ್ರತಾ ವಿಷಯಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಸಾರ್ವಜನಿಕ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಗೃಹ ಸಚಿವಾಲಯವು ಕಠಿಣ ನಿಲುವನ್ನು ತಳೆದಿದೆ.. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರೊಂದಿಗೆ ದೂರವಾಣಿ ಮೂಲಕ ಭದ್ರತೆಯ ವಿಷಯದ ಕುರಿತು ಚರ್ಚಿಸಿದರು. ಅದರ ನಂತರ, ಗೋವಾ ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಚರ್ಚಿಸಿದರು. ಸಭೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ, ಪೆÇಲೀಸ್ ಮಹಾನಿರ್ದೇಶಕರು, ಪೆÇಲೀಸ್ ಅಧಿಕಾರಿಗಳು, ಸಿಐಎಫ್, ನೌಕಾಪಡೆ, ಕರಾವಳಿ ಕಾವಲು ಪಡೆ, ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಮಯದಲ್ಲಿ, ರಾಜ್ಯದಲ್ಲಿ ಭದ್ರತೆಗಾಗಿ ಕೂಂಬಿಂಗ್ ಕಾರ್ಯಾಚರಣೆಗಳು ಮತ್ತು ಹಠಾತ್ ದಿಗ್ಬಂಧನಗಳಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈಗ, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಪ್ರವಾಸಿ ಸ್ಥಳಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು. ವಾರದ ಮಾರುಕಟ್ಟೆಯಲ್ಲಿ ಮಾರಾಟಗಾರರನ್ನು ಪರಿಶೀಲಿಸಲಾಗುತ್ತದೆ. ಅವರು ತಮ್ಮ ಗುರುತಿನ ಚೀಟಿಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು. ರಾಜ್ಯದಲ್ಲಿ 856 ಟ್ರಾಲರ್‍ಗಳು ಮತ್ತು 1,206 ಬೋಟ್ ಗಳಿವೆ. ಟ್ರಾಲರ್ ಗಳು ಮತ್ತು ಬೋಟ್ ಗಳ ಕಾರ್ಮಿಕರ ಮೇಲೆ ನಿಗಾ ಇಡಲು ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್‍ಗಳನ್ನು ನೀಡುವ ಪ್ರಸ್ತಾಪವೂ ಇದೆ ಎನ್ನಲಾಗಿದೆ.

ಗೋವಾದಲ್ಲೂ ಪಾಕಿಸ್ತಾನಿ ನಾಗರೀಕರು..?
ರಾಜ್ಯದಲ್ಲಿ ವಾಸಿಸುವ ಪಾಕಿಸ್ತಾನಿ ನಾಗರಿಕರ ವಿಷಯವನ್ನು ಈ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಮಯದಲ್ಲಿ, ರಾಜತಾಂತ್ರಿಕ, ಸರ್ಕಾರಿ ಮತ್ತು ಎಲ್ ಟಿವಿ ಹೊರತುಪಡಿಸಿ ಇತರ ವೀಸಾಗಳಲ್ಲಿ ಗೋವಾದಲ್ಲಿ ವಾಸಿಸುವ ಪಾಕಿಸ್ತಾನಿ ನಾಗರಿಕರಿಗೆ ದೇಶವನ್ನು ತೊರೆಯಲು ಆದೇಶಗಳನ್ನು ನೀಡಲಾಗಿದೆ. ಮಾಹಿತಿಯ ಪ್ರಕಾರ, 17 ಪಾಕಿಸ್ತಾನಿ ನಾಗರಿಕರು ಎಲ್ ಟಿವಿ ವೀಸಾಗಳಲ್ಲಿ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ. ಅವರಲ್ಲಿ ಕೆಲವರು ಗೋವಾದ ಜನರನ್ನು ವಿವಾಹವಾಗಿದ್ದಾರೆ. ಪೆÇಲೀಸರು ಮತ್ತು ಆಡಳಿತವು ಅವರೆಲ್ಲರ ಮೇಲೆ ನಿಗಾ ಇಡುತ್ತದೆ. ಗೋಮಂತಕರು ಭದ್ರತಾ ಕ್ರಮಗಳೊಂದಿಗೆ ಸಹಕರಿಸುವ ಮೂಲಕ ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.