ಸುದ್ದಿಕನ್ನಡ ವಾರ್ತೆ
Goa : ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ಧಾಳಿ ಘಟನೆಯ ನಂತರ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಗೋವಾ ರಾಜ್ಯದಲ್ಲಿಯೂ ಕೂಡ ಹೈ ಅಲರ್ಟ ಘೋಷಿಸಲಾಗಿದ್ದು ಗೋವಾದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸಿರುವ ಹೊರ ರಾಜ್ಯದ ಜನರ ದಾಖಲಾತಿಗಳ ತಪಾಸಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಗೋವಾದ ವಾಳಪೈ ಭಾಗದ ಸಯ್ಯದ್ ನಗರ, ನಾಗವೆ, ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಜನರು ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಬಳಿ ಬಾಡಿಗೆ ಕರಾರು ಪತ್ರರ, ಪೋಲಿಸ್ ವೆರಿಫಿಕೇಶನ್ ಸೇರಿದಂತೆ ವಿವಿಧ ದಾಖಲೆಗಳ ತಪಾಸಣಾ ಕಾರ್ಯವನ್ನು ಪೋಲಿಸರು ಕೈಗೆತ್ತಿಕೊಂಡಿದ್ದಾರೆ.
ವಾಳಪೈ ಪೋಲಿಸ್ ನಿರೀಕ್ಷಕ ವಿದೇಶ ಶಿರೋಡಕರ್ ರವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ಪ್ರಥಮೇಶ್ ಗಾವಸ್ ನೇತೃತ್ವದ ಪೋಲಿಸ್ ತಂಡ ಈ ತಪಾಸಣಾ ಕಾರ್ಯ ಕೈಗೆತ್ತಿಕೊಂಡಿದೆ.
ಪೋಲಿಸರು ನೀಡಿದ ಮಾಹಿತಿಯ ಅನುಸಾರ-ಉದ್ಯೋಗದ ನಿಮಿತ್ತ ಹೊರ ರಾಜ್ಯದ ಜನರು ವಾಳಪೈ ಭಾಗದಲ್ಲಿ ಬಂದು ನೆಲೆಸಿದ್ದಾರೆ. ಇದರಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಶಂಕೆಯಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಈ ತಪಾಸಣಾ ಕಾರ್ಯ ಇನ್ನೂ ಹಲವು ದಿನ ಮುಂದುವರೆಯಲಿದೆ. ಈ ಭಾಗದಲ್ಲಿ ಯಾರಾದರೂ ಸಂಶಯಾಸ್ಪದವಾಗಿ ಕಂಡುಬಂದರೆ ಕೂಡಲೇ ಸ್ಥಳೀಯ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಪೋಲಿಸರು ಕೋರಿದ್ದಾರೆ. ಈ ಭಾಗದಲ್ಲಿ ಪೋಲಿಸರು ಹೈ ಅಲರ್ಟ ಜಾರಿಗೊಳಿಸಿದ್ದಾರೆ.