ಸುದ್ದಿಕನ್ನಡ ವಾರ್ತೆ
Goa : ಕೇರಳದಿಂದ ತನ್ನ ಪ್ರಿಯಕರನೊಂದಿಗೆ ಗೋವಾಕ್ಕೆ ಓಡಿ ಬಂದಿದ್ದ 24 ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಗೋವಾ ಪೋಲಿಸರು ಯಶಸ್ವಿಯಾಗಿದ್ದಾರೆ. ಪ್ರಿಯಕರನೊಂದಿಗೆ ಓಡಿ ಬಂದಿದ್ದ ಈ ಯುವತಿ 12 ಲಕ್ಷ ರೂ ಮೌಲ್ಯದ ಬಂಗಾರ ತೆಗೆದುಕೊಂಡು ಪರಾರಿಯಾಗಿದ್ದಳು. ಗೋವಾ ಪೋಲಿಸರು ಇದೀಗ ಈ ಪ್ರೇಮಿಗಳನ್ನು ಕೇರಳ ಪೋಲಿಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯು ಒಬ್ಬ ರಿಕ್ಷಾ ಚಾಲಕನಾಗಿದ್ದು ಈತನು 24 ವರ್ಷದ ಯುವತಿಯ ಮಗಳನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಬರುವ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಹಾಗೂ 24 ವರ್ಷದ ಯುವತಿಯ ನಡುವೆ ಸ್ನೇಹ ಬೆಳೆಯಿತು. ಈ ಇಬ್ಬರೂ ಮನೆಯಲ್ಲಿದ್ದ ಬಂಗಾರ ತೆಗೆದುಕೊಂಡು ಗೋವಾಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ. ಈ ರಿಕ್ಷಾ ಚಾಲಕನ ವಿರುದ್ದ ಈ ಹಿಂದಿನ ಹಲವು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
24 ವರ್ಷದ ಯುವತಿಯ ಪತಿ ಕೇರಳದ ಪೋಲಿಸ್ ಠಾಣೆಯಲ್ಲಿ ನೀಡಿದ್ದ ಮಾಹಿತಿಯ ಅನುಸಾರ- ಪೋಲಿಸರು ತನಿಖಾ ಕಾರ್ಯ ಕೈಗೆತ್ತಿಕೊಂಡರು. ಈ ಇಬ್ಬರೂ ಗೋವಾಕ್ಕೆ ಬಂದಿರುವ ನಿಖರ ಮಾಹಿತಿಯ ಹಿನ್ನೆಲೆಯಲ್ಲಿ ಕೇರಳ ಪೋಲಿಸರು ಗೋವಾ ಪೋಲಿಸರಿಗೆ ಮಾಹಿತಿ ನೀಡಿದ್ದರು.
ಏಪ್ರಿಲ್ 19 ರಂದು ತನ್ನ ಪ್ರಿಯಕರನೊಂದಿಗೆ 24 ವರ್ಷದ ಯುವತಿ ಗೋವಾಕ್ಕೆ ಓಡಿ ಬಂದಿದ್ದಳು. ಈಕೆಯು ಮನೆಯಲ್ಲಿದ್ದ 12 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ತಂದಿದ್ದಳು. ಈ ಇಬ್ಬರೂ ಗೋವಾದ ಬಾಗಾದಲ್ಲಿರುವ ಗೆಸ್ಟ ಹೌಸ್ ನಲ್ಲಿ ತಂಗಿದ್ದರು. ಪ್ರವಾಸಿ ಪೋಲಿಸ್ ಯುನೀಟ್ ನಿರೀಕ್ಷಕ ಜತಿನ್ ಪೋತದಾರ್ ರವರ ನೇತೃತ್ವದಲ್ಲಿ ಗೋವಾದಲ್ಲಿ ಈ ಇಬ್ಬರಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಯಿತು.