ಸುದ್ದಿ ಕನ್ನಡ ವಾರ್ತೆ
ಶಿರಸಿ: ‘ಸಾವೆಂದರೆ ಹೇಗಿರುತ್ತದೆ ಅಂತ ಕಂಡ್ವಿ. ಬದುಕಿಗಾಗಿ ಅರಲು ರಾಡಿಯ ನಡುವೆ ಬೀಳತಾ, ಏಳತಾ ಓಡದ್ವಿ.
ಹೀಗೆಂದು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಿಂದ ಅಕ್ಷರಶಃ ಕೂದಲೆಲೆಯಿಂದ ಬಚಾವ್ ಆಗಿ ಊರಿಗೆ ಮರಳಿದ ಪ್ರದೀಪ ಹೆಗಡೆ ಹೇಳುವಾಗ ಅಲ್ಲಿನ ಸ್ಥಿತಿ ಕಣ್ಣೆದುರು ಬರುವಂತೆ ಇತ್ತು.
ಮೂಲತಃ ಶಿರಸಿ ತಾಲೂಕಿನ ಗುಬ್ಬಿಗದ್ದೆಯ ಪ್ರದೀಪ ಹೆಗಡೆ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿ. ಅವರ ಇಡೀ ಕುಟುಂಬ ಉಗ್ರರ ಅಟ್ಟಹಾಸದಿಂದ ಬದುಕುಳಿದು ಬಂದಿದ್ದೇ ಒಂದು ಅಚ್ಚರಿ. ಕೂದಲೆಳೆಯ ಅಂತರದಲ್ಲಿ ಅವರ ಮಡದಿ ಬಚಾವ್ ಆಗಿದ್ದರು.
ಕಾಶ್ಮೀರದ ಕನಸಿನ ಪ್ರಯಾಣ:
ಪ್ರದೀಪ ಹೆಗಡೆ ಅವರು ಪತ್ನಿ, ಮಗ ಸಹಿತ ಕಳೆದ ಏಪ್ರೀಲ್ 21 ಕ್ಕೆ ಕಾಶ್ಮೀರದ ಶ್ರೀನಗರ್ ಪ್ರವಾಸಕ್ಕೆಂದು ತೆರಳಿದ್ದರು. ಬಹು ಕಾಲದ ಕನಸಿನ ಪ್ರಯಾಣ ಅದು. ಮೊದಲ ದಿನ ಶಂಕರಾಚಾರ್ಯರ ಪುತ್ಥಳಿ ದರ್ಶನ ಮಾಡಿ ಮರುದಿನ ೨೨ರಂದು ಬೆಳಿಗ್ಗೆ ೮ಕ್ಕೆ ಹೊರಟು ಕಾಶ್ಮೀರದ ಪಹಲ್ಗಾಮ್
ಹೋಗಿದ್ದರು. ಶ್ರೀನಗರದಿಂದವ ಅದ್ಭುತ ದಾರಿಯಲ್ಲಿ ಸಾಗಿ ಬೆಳಿಗ್ಗೆ ಸುಮಾರು 11ರ ವೇಳೆಗೆ ಅಲ್ಲಿಗೆ ತಲುಪಿದ್ದರು. ಅಲ್ಲಿ ಸುಮಾರು ನೋಡುವ ಸ್ಥಳ ಇದ್ದರೂ ಅದರಲ್ಲಿ ಮಿನಿ ಸ್ವಿಟ್ಜರ್ಲೆಂಡ್ ಹೇಳುವ ಈ ಜಾಗಕ್ಕೆ ಹೊರಡಲು ನಿರ್ಧರಿಸಿದರು.
ಅಲ್ಲಿಗೆ ಹಾಗೆ ಹೋಗಲು ಸಾಧ್ಯವಿಲ್ಲ. ಹೋಗಲು ಕುದುರೆ ಏರಬೇಕು ಅಥವಾ ಟ್ರೆಕ್ ಮಾಡಿ ಹೋಗಬೇಕು. ಸುಮಾರು 7 ಕಿಮಿ ದೂರ.
ಉಗ್ರರ ದಾಳಿಗೆ ಬಲಿಯಾದ ಅಲ್ಲೆ ಪರಿಚಿತರಾದ ಆಂಧ್ರದ ಅಧಿಕಾರಿ ಕುಟುಂಬ ಹಾಗೂ ಇವರ ಕುಟುಂಬದವರು ಸೇರಿ ಒಂದುವರೆ ಗಂಟೆಗಳ ಕಾಲ ಕುದುರೆ ಕುದುರೆ ಪ್ರಯಾಣ ಮಾಡಿದ್ದರು.
ಇಳಿಜಾರಕಲು, ಅರಲಿನ ದಾರಿ:
ಕಾಡು ಪ್ರದೇಶ. ಸುಮಾರು ಶೇ. 60 ಇಳಿಜಾರಕಲಿನ ಗುಡ್ಡ ಏರಿ ಹೋಗಬೇಕು. ಅದೂ ಸ್ವಲ್ಪ ದಿನದ ಹಿಂದೆ ಮಳೆ ಬಂದಿತ್ತು ಕಾಣುತ್ತದೆ. ದಾರಿ ತುಂಬಾ ಕೆಸರು. ಮೇಲೆ ಹೋಗುವ ತನಕ 1.15 ತಾಸು ಬೇಕು. ಮೇಲೆ ಹೋದರೆ ಅದ್ಭುತ ಸ್ವರ್ಗದಂತ ಜಾಗ. ಓಡಾಡಿ ಸುಮಾರ ಫೋಟೋ ಕ್ಲಿಕ್ಕಿಸಿ ಆಗಿತ್ತು.
ಅವತ್ತು ಅಲ್ಲಿ ಸಾವಿರಗಟ್ಟಲೇ ಜನರು ಇದ್ದಿದ್ದರು. ಸುಮಾರು 5-6 ಎಕರೆ ಜಾಗ ಅದಕ್ಕೆ ಸುತ್ತಲು ಬೇಲಿ ಒಂದೇ ಒಂದು ಎಂಟ್ರಿ ಪಾಯಿಂಟ್ . ಸುಮಾರ ಒಂದ್ ತಾಸು ಓಡಾಡಿ ಮಧ್ಯಾಹ್ನ 1.50ರ ಹೊತ್ತಿಗೆ ತಿಂಡಿಗಾಗಿ ಕುಳಿತರು. ಅಲ್ಲಿ ಚಳಿಗೆ ಮ್ಯಾಗಿ ಫೇಮಸ್. ತಿಂದು ಚಾ ಚಹಾ ಕುಡಿಯುತ್ತಿದ್ದರು.
ಪಟಾಕ್ಷಿ ಅಂದರು ಮೊದಲಿಗೆ!:
ಸುಮಾರು ೨ಗಂಟೆ ಆಸುಪಾಸು. ಕೆಳಬದಿಗೆ ಎರಡು ಸಲ ಫೈರಿಂಗ್ ಸೌಂಡ್! ಎಂಥ ಶಬ್ಧ ಎಂದು ಹೋಟೆಲ್ ನವನ ಕೇಳಿದ್ರೆ ಪಟಾಕಿ ಸೌಂಡಿರಬೇಕು ಅಂದ. ಸ್ವಲ್ಪೊತ್ತಿನ ಮೊದಲು ನಾವು ಫೋಟೋ ತೆಗಿತ ಇದ್ದ ಜಾಗದಿಂದ ಎರಡು ಜನ ಶೂಟ್ ಮಾಡ್ತಾ ಇದ್ದರು. ಹಾಗೂ ನಾವ್ ಇದ್ದಲ್ಲೇ ಬರ್ತಾ ಇದ್ದ ಎಂತದು ಹೇಳಿ ಗೊತ್ತಾಗದೆ ಅಲ್ಲೇ ಎಲ್ರೂ ಮಲಗಿದರು. ಅಲ್ಲಿದ್ದ ಟೆರರ್ ಶೂಟ್ ಮಾಡ್ತಾನೇ ಇದ್ದನು. ಹಾಗೆ ಸುಮಾರು ನೂರಡಿ ಹತ್ತಿರನೇ ಬಂದರು. ಆವಾಗ ಒಂದ್ ಗುಂಡು ನನ್ನ ಹೆಂಡತಿ ಶುಭಾನ ಕಿವಿ ಪಕ್ಕದಲ್ಲಿ ಕೂದಲಿಗೆ ತಾಗ್ತಾ ಹೋಯಿತು. ಸತ್ತೇ ಹೋದೆವು ಅಂದು ಕೊಂಡೆವು.
ನಿರೀಕ್ಷೆ ಇಲ್ಲದ ಘಟನೆ. ಸಾವೇ ಎದರಿಗೆ ಬಂದಿತ್ತು. ಆಗ ಅಲ್ಲಿ ಲೋಕಲ್ ಜನ ಗೇಟ್ ಬದಿಗೆ ಓಡಿ ಅಂದರು. ಅಲ್ಲಿ ನೂಕು ನುಗ್ಗಲು ಆಯಿತು. ಶುಭಾ, ಹಾಗೂ ನಾನು ಮಗ ಸಿದ್ದಾಂತನ ಕೈ ಹಿಡಿದು ಗೇಟ್ ಹೊರಗೆ ಬಂದೆವು. ಅಲ್ಲಿಯ ದಾರಿನೂ ಗೊತ್ತಿಲ್ಲ. ಜಾರುವ, ಅರಲಿನ ನೆಲದಲ್ಲಿ ಬೀಳ್ತಾನೆ ಓಡುತ್ತಿದ್ದೆವು. ಸುಮಾರು 7 ಕಿಮಿ ದೂರ ಕೆಳಗೆ ಭಾಗಕ್ಕೆ ಓಡಬೇಕಿತ್ತು. ಮತ್ತೆ ಕಾಲಿಡಲೂ ಆಗದ ಸ್ಥಿತಿ. ಜಾರುವ ನೆಲ. ಪತ್ನಿ ಶುಭಾಗೆ ಎಲ್ಲಿಂದ ಧೈರ್ಯ ಬಂದಿತ್ತೋ. ‘ಯಂಗಕ್ಕೆ ಹಿಂಗ್ ಬನ್ನಿ ಹಾಂಗ್ ಬನ್ನಿ ಹೇಳಿ ಮುಂದೆ ಓಡ್ತಾ ಇತ್ತು’ ಎಂದು ನೆನಪಿಸಿಕೊಂಡರು.
೨೦ ನಿಮಿಷಗುಂಡಿನ ಶಬ್ಧ ಕೇಳ್ತಿತ್ತು.
ನಾವು ಕೆಳಗಡೆ ಓಡುತ್ತಿದ್ದರೂ ಸುಮಾರು ೨೦ ನಿಮಿಷ ಗುಂಡಿನ ಶಬ್ಧ ಕೇಳತಾನೇ ಇತ್ತು.
ಅಂತೂ ಇಂತು ಕೆಳಗೆ ಬಂದೆವು. ಬಂದರೆ ಮೂರು ಜನ ಗನ್ ಮ್ಯಾನ್ ಇದ್ದರು. ನಮಗೆ ಅವು ಪೊಲೀಸ್ ಅಥಚಾ ಟೆರರಿಸ್ಟ್ ಹೇಳ ಕನ್ಫ್ಯೂಷನ್ ಶುರುವಾಯಿತು. ಅಲ್ಲಿ ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲಾಗಿತ್ತು. ನಸೀಬಕ್ಕೆ ಅವು ಪೊಲೀಸ್ ಆಗಿದ್ದರು. ಕೆಳಗಡೆ ಬಂದ್ ಮೇಲೆ ಮಿಲಿಟರಿ ಬರಲಾರಂಭಿಸಿತ್ತು. ಅಲ್ಲಿಂದ ಹೇಗೋ ಶ್ರೀನಗರ್ ಗೆ ಬಂದೆವು. ಕೊನೆಹೆ ವಿಡಿಯೋ ನೋಡಿ ಗೊತ್ತಾಯಿತು. ನಮ್ ಜೊತೆ ಹೋದವರು ಬಂದ ಐಬಿ ಅಧಿಕಾರಿ ಎಂದು.
ಉಸಿರಿಗಾಗಿ ಉಸಿರು ಹಿಡಿದು ಓಡಿದೆವು. ಅಂತೂ
ಗುರುವಾರ ಬೆಂಗಳೂರಿಗೆ ಬಂದು ತಲುಪಿದೆವು. ಆದರೂ ರಾತ್ರಿ ಹಗಲು ಕಣ್ಣು ಮುಚ್ಚಿದರೂ ಅದೇ ಕಾಣುತ್ತದೆ. ಸಾವು ಎಂದರೆ ಏನೆಂದು ನೊಡಿದೆವು. ಈ ಘಟನೆಯಿಂದ ಹೊರಗೆ ಬರಲು ತಿಂಗಳೇ ಬೇಕಾಗಬಹುದು.