ಸುದ್ದಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಪಡಿತರ ಚೀಟಿಗಳ ಇ-ಕೆವೈಸಿ ನಡೆಸಲು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಗಡುವು ಪ್ರಕಟಿಸಿದೆ. ಪ್ರಸಕ್ತ ಏಪ್ರಿಲ್ 30 ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಪಡಿತರ ಚೀಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ ಎಂದು ನಾಗರಿಕ ಸರಬರಾಜು ಇಲಾಖೆ ಅಧಿಸೂಚನೆ ಹೊರಡಿಸಿದೆ.

ನವೆಂಬರ್ 2024 ರಲ್ಲಿ, ನಾಗರಿಕ ಸರಬರಾಜು ಇಲಾಖೆಯು 15 ದಿನಗಳಲ್ಲಿ ಪಡಿತರ ಚೀಟಿಗಳಿಗೆ ಇ-ಕೆವೈಸಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿತ್ತು ಮತ್ತು ಈ ಪ್ರಕ್ರಿಯೆಯನ್ನು ಮಾಡದಿದ್ದರೆ, ಫಲಾನುಭವಿಗಳ ಹೆಸರನ್ನು ಪಡಿತರ ಚೀಟಿಗಳಿಂದ ತೆಗೆದುಹಾಕಲಾಗುವುದು ಎಂದು ಹೇಳಿತ್ತು. ಆದರೆ ಈ ಪ್ರಕ್ರಿಯೆಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ನಾಗರಿಕ ಸರಬರಾಜು ಇಲಾಖೆಯು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡುವನ್ನು ಹಲವು ಬಾರಿ ವಿಸ್ತರಿಸಿತು.

ಈಗ, ಇಲಾಖೆಯು ಪರಿಷ್ಕøತ ಅಧಿಸೂಚನೆಯನ್ನು ಹೊರಡಿಸಿದ್ದು, ಪಡಿತರ ಚೀಟಿಗೆ ಇ-ಕೆವೈಸಿಯನ್ನು ಇನ್ನೂ ಪೂರ್ಣಗೊಳಿಸದ ಪಡಿತರ ಚೀಟಿ ಫಲಾನುಭವಿಗಳು ಏಪ್ರಿಲ್ 30, 2025 ರ ಮೊದಲು ಅದನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದೆ.

 

ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯ ಪ್ರತಿಗಳೊಂದಿಗೆ ಸಂಬಂಧಪಟ್ಟ ಸೊಸೈಟಿಗೆ ಭೇಟಿ ನೀಡಬೇಕು. ನಿರ್ದಿಷ್ಟ ದಿನಾಂಕದಂದು ಇ-ಕೆವೈಸಿ ಪೂರ್ಣಗೊಳಿಸಲು ವಿಫಲವಾದರೆ ಪಡಿತರ ಚೀಟಿಯಿಂದ ಹೆಸರುಗಳನ್ನು ಹೊರಗಿಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ನಾಗರಿಕ ಸರಬರಾಜು ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ವರ್ಷದ ಜನವರಿಯ ವೇಳೆಗೆ, ಎನ್ ಎಫ್ ಎಸ್ ಎ ಅಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಗೃಹ ಕಾರ್ಡ್‍ನ 4,78,305 ಫಲಾನುಭವಿಗಳಿದ್ದಾರೆ. ಈ ಪೈಕಿ ಶೇ. 68.73 ರಷ್ಟು ಅಥವಾ 3,28,761 ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ 5,93,125 ಫಲಾನುಭವಿಗಳಲ್ಲಿ, ಶೇಕಡಾ 43.5 ರಷ್ಟು ಅಥವಾ 2,85,279 ಜನರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಗೋವಾದಲ್ಲಿ ಡಬಲ್ ರೇಷನ್ ಕಾರ್ಡ..?
ಗೋವಾದಲ್ಲಿ ಹೊರ ರಾಜ್ಯದ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಬುತೇಕ ಜನರು ತಮ್ಮ ರಾಜ್ಯದಲ್ಲಿ ಹಾಗೂ ಗೋವಾದಲ್ಲಿಯೂ ರೇಷನ್ ಕಾರ್ಡ ಹೊಂದಿದ್ದಾರೆ. ಈಗಾಗಲೇ ಇವರು ತಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಆದರೆ ಗೋವಾದಲ್ಲಿ ಇ-ಕೆವೈಸಿ ಮಾಡಿಸಲು ಹೋದರೆ ತಾವು ಸಿಲುಕಿಕೊಳ್ಳುವ ಭಯ ಇವರಿಗೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸುಲಭ ಪ್ರಕ್ರಿಯೆ
ಪಡಿತರ ಚೀಟಿಯಲ್ಲಿ ನಾಲ್ಕು ಫಲಾನುಭವಿಗಳ ಹೆಸರಿದ್ದರೆ, ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಆಧಾರ್ ಕಾರ್ಡ್‍ನೊಂದಿಗೆ ಸೊಸೈಟಿಗೆ ಹೋಗಬೇಕು. ಅಲ್ಲಿ, ನೀವು ಪಿಒಎಸ್ ಯಂತ್ರದ ಮೇಲೆ ನಿಮ್ಮ ಹೆಬ್ಬೆರಳನ್ನು ಇರಿಸುವ ಮೂಲಕ ಇ-ಕೆವೈಸಿ ಮಾಡಬೇಕು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಕುಟುಂಬ ಸದಸ್ಯರೆಲ್ಲರೂ ಒಂದೇ ಬಾರಿಗೆ ಸೊಸೈಟಿಗೆ ಭೇಟಿ ನೀಡಬೇಕು. ಪಡಿತರ ಚೀಟಿಯಲ್ಲಿರುವ ಹೆಸರಿಗೆ ಆಧಾರ್ ಸಂಖ್ಯೆ ಹೊಂದಿಕೆಯಾದ ನಂತರ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.