ಸುದ್ದಿ ಕನ್ನಡ ವಾರ್ತೆ

ಮುಂಬೈ : ಮಹಾರಾಷ್ಟ್ರ ರಾಜ್ಯದ ಸರಕಾರದ ನಿಯಂತ್ರಣದಲ್ಲಿರುವ ಎಲ್ಲ ದೇವಸ್ಥಾನಗಳು ಪ್ರತಿವರ್ಷ ತಮ್ಮ ಲೆಕ್ಕಪತ್ರಗಳ ಪರಿಶೀಲನಾ ವರದಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತವೆ. ಆದರೆ, ಮಹಾರಾಷ್ಟ್ರ ವಕ್ಫ್ ಮಂಡಳಿಯು ಕಳೆದ 17 ವರ್ಷಗಳಿಂದ ಈ ಲೆಕ್ಕಪತ್ರ ಪರಿಶೀಲನಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿಲ್ಲ. ವಿಷಾದಕರ ಸಂಗತಿಯೆಂದರೆ, ಈ ವಿಷಯದಲ್ಲಿ ಸರಕಾರವೂ ವಕ್ಫ್ ಮಂಡಳಿಯೊಂದಿಗೆ ಯಾವುದೇ ವಿಚಾರಣೆ ನಡೆಸಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ವಕ್ಫ್ ಮಂಡಳಿಯಿಂದ ರಾಜ್ಯದ ಭೂಮಿಗಳನ್ನು ವಶಪಡಿಸಿಕೊಳ್ಳುವ ಹಲವು ದೂರುಗಳು ಲಭಿಸಿವೆ. ಈ ಹಿನ್ನೆಲೆಯಲ್ಲಿ, ಇದು ತೀವ್ರ ಗಂಭೀರ ವಿಷಯವಾಗಿದೆ. ಸರಕಾರವು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ರಾಜ್ಯ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವರಾದ ಶ್ರೀ. ದತ್ತಾತ್ರಯ ಭರಣೆ ಅವರಿಗೆ ಪತ್ರ ಬರೆದಿದ್ದು, ವಕ್ಫ್ ಮಂಡಳಿಯನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

 

ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯು ಸುಮಾರು ಒಂದು ಲಕ್ಷ ಎಕರೆ ಭೂಮಿಯುಳ್ಳ ಸಂಸ್ಥೆಯಾಗಿದ್ದು, ಇದಕ್ಕೆ ಸರಕಾರ ಪ್ರತಿವರ್ಷ ಕೋಟಿ ಕೋಟಿ ಹಣ ನೀಡುತ್ತದೆ. ಕಚೇರಿ ಖರ್ಚು, ಅಧಿಕಾರಿಗಳ ವಾಹನಗಳಿಗೆ ಡೀಸೆಲ್, ನೌಕರರ ವೇತನಕ್ಕಾಗಿ ಸರಕಾರದ ಹಣ ಬಳಸಲಾಗುತ್ತದೆ. ವಕ್ಫ್ ಬೋರ್ಡ್ ಕಾಯಿದೆ – 1995 ಪ್ರಕಾರ, ಪ್ರತಿವರ್ಷ ಲೆಕ್ಕಪತ್ರ ಪರಿಶೀಲನಾ ವರದಿ ಸರಕಾರಕ್ಕೆ ಸಲ್ಲಿಸಲು ಕಡ್ಡಾಯವಾಗಿದೆ. ಸರಕಾರವು ಅದನ್ನು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆದರೆ, 2008 ರಿಂದ ಇಂದಿನ ತನಕ ವಕ್ಫ್ ಮಂಡಳಿಯಿಂದ ಒಂದು ಕೂಡ ಲೆಕ್ಕಪತ್ರ ಪರಿಶೀಲನಾ ವರದಿ ಸಲ್ಲಿಸಿಲ್ಲ ಎಂಬ ಮಾಹಿತಿ ಮಾಹಿತಿ ಹಕ್ಕು ಕಾಯಿದಿಯಡಿ ಲಭ್ಯವಾಗಿದೆ.

ಒಂದೆಡೆ ದೇವಾಲಯಗಳ ಹಣವನ್ನು ಸರಕಾರದ ಯೋಜನೆಗಳಿಗೆ ಬಳಸಲಾಗುತ್ತದೆ, ಆದರೆ ವಕ್ಫ್ ಮಂಡಳಿಗೆ ಸರಕಾರ ಪ್ರತಿವರ್ಷ ಅನುದಾನ ನೀಡುತ್ತದೆ. ವಕ್ಫ್ ಮಂಡಳಿಯ ಬಳಿ ಇಷ್ಟು ಭೂಮಿ ಎಲ್ಲಿಂದ ಬಂದಿದೆ ? ಇದರ ಪ್ರಮಾಣ ಹೇಗೆ ಹೆಚ್ಚುತ್ತಿದೆ ? ಈ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಬಂದಿದ್ದು, ಈ ಬಗ್ಗೆ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಗಂಭೀರವಾಗಿ ಪ್ರಶ್ನೆ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಆಡಳಿತದಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪ್ರತಿವರ್ಷ ಲೆಕ್ಕಪತ್ರ ಪರಿಶೀಲನೆ ನಡೆಸಿದರೆ, ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಆದರೆ ಒಂದೇ ಬಾರಿಗೆ 10 ವರ್ಷಗಳ ಲೆಕ್ಕಪತ್ರ ಪರಿಶೀಲನೆ ನಡೆಸಿದರೆ, ಅಂಕಿ-ಅಂಶಗಳನ್ನು ತಿರುಚಲು ಅಥವಾ ಅಡಗಿಸಲು ಸಾಧ್ಯವಾಗುತ್ತದೆ. ಇದು ಅತಿ ಗಂಭೀರ ವಿಷಯ. ಸರಕಾರದ ಆದೇಶವನ್ನು ಪಾಲನೆ ಮಾಡದಿದ್ದರೆ, ವಕ್ಫ್ ಮಂಡಳಿಯನ್ನು ವಜಾಗೊಳಿಸಲು ವಕ್ಫ್ ಕಾಯಿದೆಯ ಅಂಶಗಳನ್ನು ಬಳಸಬಹುದು. ಈ ಅಧಿಕಾರ ಸರಕಾರಕ್ಕಿದೆ.

ಸರ್ವೋಚ್ಚ ನ್ಯಾಯಾಲಯ ಮತ್ತು ಇತರ ನ್ಯಾಯಾಲಯಗಳಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿವೆ. ಯಾವ ನ್ಯಾಯಾಲಯದಲ್ಲಿ ಪ್ರಕರಣಗಳಿವೆ ? ಅವುಗಳ ವಿಚಾರಣಾ ದಿನಾಂಕ ಯಾವುದು ? ನ್ಯಾಯಮಂಡಳಿಗಳ ವಿವರಗಳನ್ನು ವೈಬ್‌ಸೈಟ್‌ನಲ್ಲಿ ಪ್ರಕಟಿಸಲು ಬೇಡವೆ? ಆದರೆ ಮಹಾರಾಷ್ಟ್ರ ವಕ್ಫ್ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನೂ ನೀಡಲಾಗುತ್ತಿಲ್ಲ ಎಂದು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಹೇಳಿದ್ದಾರೆ.