ಸುದ್ದಿ ಕನ್ನಡ ವಾರ್ತೆ ಪಣಜಿ: ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸುವಂತಿಲ್ಲ. ಆದ್ದರಿಂದ ಆತ್ಮರಾಮ ಬಾರ್ವೆ ಅವರ ನೇಮಕ ರದ್ದುಪಡಿಸಿ ಅವರ ಜಾಗಕ್ಕೆ ರಾಜಕೀಯೇತರ ವ್ಯಕ್ತಿಯನ್ನು ನೇಮಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸುನೀಲ ಕವಠಣಕರ ಆಗ್ರಹಿಸಿದರು. ಪಣಜಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಾಯಿಶ್ ಅರೋಸ್ಕರ್ ಉಪಸ್ಥಿತರಿದ್ದರು.
ಆತ್ಮಾರಾಮ್ ಬರ್ವೆ ಬಿಜೆಪಿ ಕಾರ್ಯಕರ್ತ ಎಂದು ಕವಠಣಕರ ಹೇಳಿದರು. ಅವರು ಈ ಹಿಂದೆ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರಿಗೆ ಒಎಸ್ಡಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಿರುವಾಗ ಅವರನ್ನು ರಾಜ್ಯ ಮಾಹಿತಿ ಆಯುಕ್ತರನ್ನಾಗಿ ನೇಮಿಸುವುದು ಸೂಕ್ತವಲ್ಲ. ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಕಚೇರಿ ಬಗ್ಗೆ ಮಾಹಿತಿ ಕೇಳಿದರು. ಸಿಗದ ಹಿನ್ನೆಲೆಯಲ್ಲಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರೆ ಆತ್ಮರಾಮ್ ಬಾವೆ ಅವರು ಈ ಹಿಂದೆ ಕೆಲಸ ಮಾಡಿದ ಕಚೇರಿಯ ಮಾಹಿತಿ ನೀಡಬಹುದೇ ಎಂದು ಸರಕಾರ ಉತ್ತರಿಸಬೇಕು ಎಂದು ಕವಠಣಕರ್ ಹೇಳಿದರು.
ಈ ಹಿಂದೆ ಕಾಂಗ್ರೆಸ್ ಮಾಹಿತಿ ಹಕ್ಕು ಕಾಯ್ದೆಯಡಿ ಜನರ ಸಮಸ್ಯೆಗಳನ್ನು ಬಗೆಹರಿಸಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ಸರಕಾರಿ ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆರ್ಟಿಐ ಅರ್ಜಿಗಳನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸಲಾಗುತ್ತಿದೆ. ಅದೇ ರೀತಿ ಬಾರ್ವೆ ನೇಮಕವೂ ಮಾಹಿತಿ ಆಯೋಗದ ಪಾರದರ್ಶಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಆದ್ದರಿಂದ ಸರಕಾರ ಅವರ ನೇಮಕಾತಿಯನ್ನು ರದ್ದುಪಡಿಸಿ ಆ ಜಾಗದಲ್ಲಿ ರಾಜಕೀಯೇತರ ವ್ಯಕ್ತಿಯನ್ನು ನೇಮಿಸಬೇಕು ಎಂದು ಸುನೀಲ ಕವಠಣಕರ್ ನುಡಿದರು.
ನೇಮಕಾತಿ ನಿಯಮಗಳ ಪ್ರಕಾರ ನಡೆದಿದೆ- ಮುಖ್ಯಮಂತ್ರಿ ಸಾವಂತ್….
ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಪ್ರತಿಕ್ರಿಯೆ ನೀಡಿ- ನಿಯಮಾನುಸಾರ ರಾಜ್ಯ ಮಾಹಿತಿ ಆಯುಕ್ತರನ್ನು ನೇಮಿಸಲಾಗಿದೆ. ಈ ಸ್ಥಾನದಲ್ಲಿ ಕೆಲಸ ಮಾಡಲು, ಒಬ್ಬ ವ್ಯಕ್ತಿಯು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ಆಡಳಿತದಲ್ಲಿ ಅನುಭವವನ್ನು ಹೊಂದಿರಬೇಕು. ತ್ರಿಸದಸ್ಯ ಸಮಿತಿಯು ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಿ ಮಾನದಂಡಕ್ಕೆ ಸರಿಹೊಂದುವ ವ್ಯಕ್ತಿಯನ್ನು ನೇಮಿಸಿದೆ ಎಂದರು.