ಸುದ್ಧಿಕನ್ನಡ ವಾತೇ
Goa : ವಂದೇ ಭಾರತ್ ರೈಲು ಶೀಘ್ರದಲ್ಲಿಯೇ ಗೋವಾದ ಹೊರಗೆ ಮಾತ್ರವಲ್ಲದೆಯೇ ಗೋವಾದ ಒಳಗೂ ಓಡಾಟ ಆರಂಭಗೊಳ್ಳಲಿದೆ. ಇತರ ರಾಜ್ಯಗಳಂತೆಯೇ ಗೋವಾದಲ್ಲಿಯೂ ಕೂಡ ಅಂತರ್ ನಗರ ರೈಲು ಸೇವೆ ಕೂಡ ಪ್ರಾರಂಭಿಸಲಾಗುವುದು. ಮುಂಬರುವ 2 ರಿಂದ 3 ವರ್ಷಗಳಲ್ಲಿ ವಂದೇ ಭಾರತ್ ನಂತರ ರೈಲುಗಳು ಕಾಣಕೋಣದಿಂದ-ಪೆಡ್ನೆ ವರೆಗೆ ಓಡಾಟ ನಡೆಸುವುದನ್ನು ಕಾಣಬಹುದಾಗಿದೆ. ಈ ಸೇವೆಯನ್ನು ಕ್ರಮೇಣವಾಗಿ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಪರ್ವರಿಯ ಸಚಿವಾಲಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಗೋವಾದಲ್ಲಿ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಅಭಿವೃದ್ಧಿಗಾಗಿ ಕೇಂದ್ರ ಬಜೇಟ್ ನಲ್ಲಿ 100 ಕೋಟಿ ರೂಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಹೊಸ ರೈಲು ಮಾರ್ಗ, ಡಬಲ್ ಟ್ರ್ಯಾಕ್ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಒಳಗೊಂಡಿದೆ. ಗೋವಾದಲ್ಲಿ ಕಾಣಕೋಣದಿಂದ ಪೆಡ್ನೆ ವರೆಗೆ ನಗರದೊಳಗಿನ ಸಾರಿಗೆಗಾಗಿ ಮೊದಲ ಎಕ್ಸಪ್ರೆಸ್ ರೈಲು ಪ್ರಾರಂಭಿಸುವ ಪ್ರಯತ್ನ ನಡೆಯುತ್ತಿದೆ. ನಂತರ ಈ ರೈಲು ಮಾರ್ಗಗಳಲ್ಲಿ ಪೊಂಡಾ ಮತ್ತು ಪಣಜಿಯನ್ನೂ ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.