ಪಣಜಿ: ಕಳೆದ ವರ್ಷ ಗೋವಾ ಕನ್ನಡ ಸಮಾಜವು ಪಣಜಿಯಲ್ಲಿ ಸ್ವಂತ ಕಛೇರಿ ಖರೀದಿಸಿದೆ, ನಾವೆಲ್ಲ ಸೇರಿ ಪ್ರಯತ್ನಿಸಿದರೆ ಇನ್ನು ಐದು ವರ್ಷಗಳಲ್ಲಿ ಗೋವಾ ಕನ್ನಡ ಸಮಾಜದ ವತಿಯಿಂದ ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ಹಾಗೂ ಗೋವಾ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್.ಧ್ರುವಕುಮಾರ್ ನುಡಿದರು.
ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಜೆ ಪಣಜಿಯ ಮೆನೆಝಸ್ ಬ್ರಗಾಂಝ ಸಭಾಗೃಹದಲ್ಲಿ ಆಯೋಜಿಸಿದ್ದ ಶ್ರಾವ್ಯ ಶ್ರಾವಣ ಪದಗ್ರಹಣ-2024 ಸಮಾರಂಭದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಾವು ಬೇರೆ ಬೇರೆ ವಿಷಯಕ್ಕೆ ನಾವು ಸಾಕಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಆದರೆ 40 ವರ್ಷಗಳ ಗೋವಾ ಕನ್ನಡ ಸಮಾಜಕ್ಕೆ ಪ್ರತಿಯೊಬ್ಬರೂ ತಮ್ಮ ಒಂದು ದಿನದ ಖರ್ಚನ್ನು ಗೋವಾ ಕನ್ನಡ ಸಮಾಜಕ್ಕೆ ನೀಡಿದರೆ, ಇದರಿಂದ ಗೋವಾ ಕನ್ನಡ ಸಮಾಜವು ದೊಡ್ಡದಾಗಿ ಬೆಳೆದು ಮುಂಬರುವ ದಿನಗಳಲ್ಲಿ ನಮ್ಮ ಕಾರ್ಯ ಚಟುವಟಿಕೆಗಳಿಗೆ ತುಂಬಾ ಅನುಕೂಲವಾಗಲಿದೆ. ನಮ್ಮಲ್ಲಿ ಕನ್ನಡಾಭಿಮಾನ ಹೀಗೆಯೇ ಮುಂದುವರೆಯಬೇಕು. ಗೋವಾದಲ್ಲಿ ಕನ್ನಡ ಸಮಾಜವು ಗೋವಾ ಸರ್ಕಾರದೊಂದಿಗೂ ಉತ್ತಮ ಬಾಂಧವ್ಯ ಹೊಂದಿರಬೇಕು. ಗೋವಾ ಕನ್ನಡ ಸಮಾಜವು ಸರ್ಕಾರದ ಮೇಲೆ ಸಂಪೂರ್ಣ ಅವಲಂಬನೆಯಾಗಿರದೆಯೇ ನಾವೇ ಕನ್ನಡ ಸಮಾಜಕ್ಕೆ ಸದಸ್ಯತ್ವ ಅಭಿಯಾನದ ಮೂಲಕ ಮತ್ತು ಹಣವನ್ನು ಸಂಗ್ರಹಿಸುವ ಮೂಲಕ ಗೋವಾದಲ್ಲಿ ಕನ್ನಡ ಭವನ ಕಟ್ಟೋಣ. ನಾನು ನನ್ನ ಜೀವನ ಪರ್ಯಂತ ಗೋವಾ ಕನ್ನಡ ಸಮಾಜಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಪ್ರತಿ ವರ್ಷ ಒಂದಿಷ್ಟು ಹಣವನ್ನು ನೀಡುತ್ತೇನೆ ಎಂದು ಟಿ.ಎನ್.ಧ್ರುವಕುಮಾರ್ ನುಡಿದರು.
ಗೋವಾ ಕನ್ನಡ ಸಮಾಜದ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ಅರುಣಕುಮಾರ್ ಮಾತನಾಡಿ- ನನ್ನ ಪದಗ್ರಹಣ ಸಮಾರಂಭದಲ್ಲಿ ಗೋವಾ ಕನ್ನಡ ಸಮಾಜದ ಸಾರಥ್ಯ ವಹಿಸಿದ್ದ ಎಲ್ಲಾ ಮಾಜಿ ಅಧ್ಯಕ್ಷರು ಉಪಸ್ಥಿತರಿರಬೇಕು ಎಂಬುದು ನನ್ನ ಕನಸಾಗಿತ್ತು, ಇಂದು ಅದು ಈಡೇರಿದೆ. ಈ ಸಮಾಜದಲ್ಲಿ ಸಾಕಷ್ಟು ಕೆಲಸ ಮಾಡಬೇಕು ಎಂದು ನಾನು ಕನಸನ್ನು ಹೊಂದಿದ್ದೇನೆ. ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಅಧ್ಯಕ್ಷನಾಗಿ ನಾನೊಬ್ಬನೇ ಎಲ್ಲವನ್ನೂ ಮಾಡಲು ಸಾರ್ಧಯವಿಲ್ಲ, ನನಗೆ ನಮ್ಮ ಎಲ್ಲ ಪದಾಧಿಕಾರಿಗಳ ಹಾಗೂ ಕನ್ನಡಿಗರ ಸಹಕಾರ ಅಗತ್ಯ ಎಂದರು.
ಗೋವಾ ಕನ್ನಡ ಸಮಾಜದ ನೂತನ ಪದಾಧಿಕಾರಿಗಳಿಗೆ ಟಿ.ಎನ್.ಧ್ರುವಕುಮಾರ್ ಗುರುತಿನ ಚೀಟಿ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು. ಉಧ್ಘಾಟಕರಾಗಿ ಆಗಮಿಸಿದ್ದ ಕರ್ನಾಟಕ ಹಾಗೂ ಗೋವಾ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಟಿ.ಎನ್ ಧ್ರುವಕುಮಾರ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಗೌರವ ಉಪಸ್ಥಿತರಿದ್ದ ಗೋವಾ ಕನ್ನಡ ಸಮಾಜದ ಮಾಜಿ ಅಧ್ಯಕ್ಷರಾದ ವಿ.ವಿ.ಕುಲಕರ್ಣಿ, ಅರವಿಂದ ಯಾಳಗಿ, ರಾಜಶೇಖರ ಬಿ.ಕುಬ್ಸದ್, ವಿಜಯ್ ಶೆಟ್ಟಿ, ಪ್ರಹ್ಲಾದ ಗುಡಿ, ಮಹಾಬಲ ಭಟ್ ರವರನ್ನು ಗೌರವಿಸಲಾಯಿತು. ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ ಸನ್ಮಾನ ಪತ್ರವನ್ನು ವಾಚಿಸಿದರು. ಗೋವಾ ಕನ್ನಡ ಸಮಾಜನ ಮಾಜಿ ಪದಾಧಿಕಾರಿಗಳಿಂದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು.
ಬಿ.ಆರ್.ನವೀನ್ ತೀರ್ಥಹಳ್ಳಿ ಹಾಗೂ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು. ವಾಸ್ಕೊದ ಶಿವಾನಂದ ಜತ್ತಿ ರವರು ಭಕ್ತಿಗೀತೆ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದರು. ಗೋವಾ ಕನ್ನಡ ಸಮಾಜಕ್ಕೆ ಖಾಯಂ ನಿಮಂತ್ರಿತರಾಗಿ ಆಯ್ಕೆಯಾದ ಹಿರೀಯ ಕನ್ನಡಿಗರನ್ನು ಗೌರವಿಸಲಾಯಿತು. ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷೆ ಅಖಿಲಾ ಕುರಂದವಾಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಕಾಂತ ಲೋಣಿ ಕೊನೆಯಲ್ಲಿ ವಂದನಾರ್ಪಣೆಗೈದರು. ಗೋವಾ ಕನ್ನಡ ಸಮಾಜದ ಕಛೇರಿಯಲ್ಲಿ ವಿಜಯ್ ಕುರಂದವಾಡ,ಅಖಿಲಾ ಕುರಂದವಾಡ ದಂಪತಿಗಳು ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ನೆರವೇರಿಸಿದರು, ಪೂಜೆಯ ಪ್ರಸಾದವನ್ನು ಸಮಾರಂಭದಲ್ಲಿ ವಿತರಿಸಲಾಯಿತು.
ಗೋವಾದ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಕನ್ನಡಿಗರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.