ಸುದ್ಧಿಕನ್ನಡ ವಾರ್ತೆ
ಹೊನ್ನಾವರ: ಸ್ಯಾಂಡಲ್ ವುಡ್ ಹಿರೀಯ ನಟಿ ಉಮಾಶ್ರಿ ರವರು ಮೊದಲ ಬಾರಿಗೆ ಯಕ್ಷಗಾನ ಪಾತ್ರದಲ್ಲಿ ಮಿಂಚಿದ್ದು, ಈ ಮೂಲಕ ಅವರು ಯಕ್ಷ ದಿಗ್ಗಜರೊಬ್ಬರ ಆಸೆ ನೆರವೇರಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಸಂತ ಅಂಥೋನಿ ಮೈದಾನದಲ್ಲಿ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದಿಂದ ಶುಕ್ರವಾರ ರಾತ್ರಿ ಪ್ರದರ್ಶನಗೊಂಡ “ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ಪ್ರಸಂಗದಲ್ಲಿ ಹಿರೀಯ ನಟಿ ಉಮಾಶ್ರೀ ಮಂಥರೆ ಪಾತ್ರದಲ್ಲಿ ಮಿಂಚಿದ್ದಾರೆ.ಒಂದು ತಾಸು ವೇದಿಕೆಯಲ್ಲಿ ಯಕ್ಷ ನೃತ್ಯಗಳೊಂದಿಗೆ ನಿರರ್ಗಳ ಅರ್ಥಗಾರಿಕೆಯ ಮೂಲಕ ಉಮಾಶ್ರಿ ಪ್ರೇಕ್ಷಕರ ಮನ ಗೆದ್ದರು. (actress Umashree Manthare shines in Yakshagana episode “Shri Ram Pattabhishek”)
ನಟಿ ಉಮಾಶ್ರೀ ಸುದ್ಧಿಗಾರರೊಂದಿಗೆ ಮಾತನಾಡಿ- ಯಕ್ಷಗಾನದಲ್ಲಿ ನಾನು ಅಭಿನಯಿಸುವ ನಿರೀಕ್ಷೆಯಿರಲಿಲ್ಲ. ಹಿರೀಯ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ ರವರು ಹಲವು ದಿನಗಳಿಂದ ಯಕ್ಷಗಾನ ಪಾತ್ರ ಮಾಡುವಂತೆ ಹೇಳುತ್ತಿದ್ದರು. ಅವರ ತಂದೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ರವರು ನನ್ನನ್ನು ಮಂಥರೆ ಪಾತ್ರದಲ್ಲಿ ನೋಡಲು ಬಯಸಿದ್ದರಂತೆ. ಇದರಿಂದಾಗಿ ನಾನು ಇದೀಗ ಅವರ ಆಸೆ ಈಡೇರಿಸಿದ ಸಂತೃಪ್ತಿ ಸಿಕ್ಕಿದೆ ಎಂದರು.