ಸುದ್ಧಿಕನ್ನಡ ವಾರ್ತೆ
Goa: ಪ್ರಸ್ತುತ ಚೀನಾದಲ್ಲಿ HMPV ವೈರಸ್ ಏಕಾಏಕಿ ಕಾಣಿಸಿಕೊಂಡಿದ್ದು, ಭಾರತದಲ್ಲೂ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಇನ್ನೇನು ಹದಿನೈದು ದಿನದಲ್ಲಿ ಏನಾಗಲಿದೆ ಎಂದು ಕಾದುನೋಡಬೇಕಿದೆ. ಹಾಗಾಗಿ ಈಗ ಗಾಬರಿಯಾಗುವ ಅಗತ್ಯವಿಲ್ಲ. ಆದರೆ ಎಲ್ಲರೂ ಸೂಕ್ತ ಕಾಳಜಿ ವಹಿಸಬೇಕು ಎಂದು ಡಾ. ಶೇಖರ್ ಸಾಲ್ಕರ್ ಗೋವಾ ರಾಜ್ಯದ ಜನತೆಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು, ಗುಜರಾತ್ ನಲ್ಲಿ ಮಕ್ಕಳಿಗೆ ಸೋಂಕು ತಗುಲಿದ್ದು, ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಅವರು ಗೋವಾ ರಾಜ್ಯದ ಜನತೆಯ ಬಳಿ ಮನವಿ ಮಾಡಿದರು. ಈ ವೈರಸ್‍ಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಸರಿಯಾದ ಕಾಳಜಿ ವಹಿಸುವುದು ಅವಶ್ಯಕ. ಇದಕ್ಕೆ ವಿಶೇಷ ತನಿಖೆಯ ಅಗತ್ಯವಿದೆ. ರಾಜ್ಯದ ಮಣಿಪಾಲ್ ಆಸ್ಪತ್ರೆಯಲ್ಲಿ ಈ ಸೌಲಭ್ಯವಿದೆ. ಅಲ್ಲದೆ ಈ ಸ್ಥಳದಲ್ಲಿ 27 ಬಗೆಯ ವೈರಸ್ ಗಳ ಮಾಹಿತಿ ಲಭ್ಯವಿದ್ದು, ಒಂದು ಗಂಟೆಯೊಳಗೆ ರೋಗನಿರ್ಣಯ ಮಾಡಲಾಗುತ್ತದೆ ಎಂದರು. ಆದರೆ ಸದ್ಯಕ್ಕೆ ಗೋವಾದ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಡಾ. ಸಾಲ್ಕರ್ ವಿವರಿಸಿದರು.
ಗೋವಾದ ಚೋಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚೀನಾದಲ್ಲಿ HMPV ವೈರಸ್ ಹರಡಿದ್ದರೂ, ಪ್ರಸ್ತುತ ಭಾರತದಲ್ಲಿ ಯಾವುದೇ ಭಯವಿಲ್ಲ ಎಂದು ಸಾಲ್ಕರ್ ಹೇಳಿದರು. ಆದರೂ ಮಕ್ಕಳಿಗೆ ವಿಶೇಷ ಕಾಳಜಿ ಬೇಕು. ಗೋವಾ ಮತ್ತು ಇತರ ನೆರೆಯ ರಾಜ್ಯಗಳಲ್ಲಿ ಎಚ್ ಎಂಪಿವಿ ವೈರಸ್ ನ ಯಾವುದೇ ಪ್ರಕರಣ ಕಂಡುಬಂದಿಲ್ಲ. ಇನ್ನಾದರೂ ಜನರು ಈ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಿದರೆ ಅನುಕೂಲವಾಗುತ್ತದೆ ಎಂದು ಡಾ. ಸಾಲ್ಕರ್ ಅಭಿಪ್ರಾಯಪಟ್ಟರು.