ಪಣಜಿ: ಗೋವಾ ಕನ್ನಡ ಸಮಾಜ ರಾಜಕೀಯ ಪ್ರೇರಿತ ಸಂಸ್ಥೆ ಅಲ್ಲ. ಗೋವಾ ಕನ್ನಡ ಸಮಾಜದ ಕಾಯಂ ನಿಮಂತ್ರಿತರು ಕನ್ನಡ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ತಮ್ಮ ಸಹಾಯ ಸಹಕಾರ ನೀಡಬೇಕು ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ್ ಕುಮಾರ್ ನುಡಿದರು.

ಅಗಸ್ಟ್ 30ರಂದು ಪಣಜಿಯ ಮೆನೇಜಸ್ ಬ್ರಗಾಂಜ ಸಭಾಗ್ರಹದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪಣಜಿಯ ನವರತ್ನ ಹೋಟೆಲ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗೋವಾ ಕನ್ನಡ ಸಮಾಜವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಗೋವಾ ಕನ್ನಡ ಸಮಾಜಕ್ಕೆ ತನ್ನದೇ ಆದ ಚೌಕಟ್ಟು ಇದೆ. ಈ ಚೌಕಟ್ಟಿನ ಅಡಿಯಲ್ಲಿಯೇ ನಾವು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಅಗಸ್ಟ್ 30ರಂದು ಪಣಜಿಯಲ್ಲಿ ನಡೆಯುವ ಪದಗ್ರಹಣದಲ್ಲಿ ಗೋವಾ ಕನ್ನಡ ಸಮಾಜದ ನೂತನ ಸಮಿತಿಯ ಅಧಿಕೃತ ಘೋಷಣೆ ಆಗಲಿದೆ ಎಂದು ಅರುಣ್ ಕುಮಾರ್ ನುಡಿದರು.

ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬಾದಾಮಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿ_ ಇಷ್ಟು ದಿನ ಗೋವಾ ಕನ್ನಡ ಸಮಾಜಕ್ಕೆ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗರನ್ನು ಇಂದು ಕಾಯಂ ನಿಂಂತ್ರಿತ ರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪದಗ್ರಹಣ ಸಮಾರಂಭದ ಒಂದು ಗೋವಾ ಕನ್ನಡ ಸಮಾಜದ ಪಣಜಿ ಕಚೇರಿಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಲಾಗಿದೆ. ವಿಜಯ ಕುರಂದವಾಡ ಅಖಿಲಾ ಕುರಂದ ವಾಡ ದಂಪತಿಗಳು ಮಹಾಪೂಜೆಯ ಯಜಮಾನತ್ವ ಸ್ವೀಕರಿಸಲು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ್ ಲೋಣಿ ಕೊನೆಯಲ್ಲಿ ವಂದಿಸಿದರು.

ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ, ಅಖಿಲ ಕುರಂದವಾಡ, ಸಹ ಕಾರ್ಯದರ್ಶಿ, ಪ್ರಹ್ಲಾದ್ ಗುಡಿ, ಗಣೇಶ್ ಹೆಗಡೆ, ಸದಸ್ಯರಾದ ಶ್ಯಾಮ ಸುದ್ದಿನ್ ಸೊಲ್ಲಾಪುರಿ, ಪ್ರಕಾಶ್ ಭಟ್, ಸುನಿಲ್ ಕುಮಟಳ್ಳಿ, ಕಾಯಂ ನಿಮಂತ್ರಿತ ಸದಸ್ಯರಾದ ಅಶೋಕ್ ಶೆಟ್ಟಿ, ಪ್ರಶಾಂತ್ ಜೈನ, ಉದಯಕುಮಾರ್ ಜವಳಿ, ಗಣೇಶ್ ಶೆಟ್ಟಿ, ಶರತ್ ಶೆಟ್ಟಿ, ಅಶೋಕ್ ಶೆಟ್ಟಿ, ಸಂತೋಷ್ ಕೆ ಎಸ್, ಯೋಗರಾಜ ಶಾನಭಾಗ್, ಸಂಜೀವ ಕುಲಕರಣಿ, ವಿಶ್ವನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಖಾಯಂ ನಿಮಂತ್ರಿತ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು. ಪದಗ್ರಹಣ ಸಮಾರಂಭದ ಸಿದ್ಧತಾ ಕಾರ್ಯಗಳ ಕುರಿತು ಚರ್ಚೆ ನಡೆಸಲಾಯಿತು.