ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯಮಂತ್ರಿಮಂಡಳ ವಿಸ್ತರಣೆ ಯಾವಾಗ..? ಇದು ಎಲ್ಲರಲ್ಲಿಯೂ ಮೂಡಿರುವ ಪ್ರಶ್ನೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ಮಂತ್ರಿಮಂಡಳದ ವಿಸ್ತರಣೆಯ ಚರ್ಚೆ ನಡೆಯುತ್ತಲೇ ಇದೆ. ಆದರೆ ಕಳೆದ ಎರಡು ದಿನಗಳಿಂದ ಇದಕ್ಕೆ ಭಾರಿ ವೇಗ ಸಿಕ್ಕಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮೂವರು ಶಾಸಕರೊಂದಿಗೆ ದೆಹಲಿಗೆ ತೆರಳಿದ್ದರು. ಕೂಡಲೇ ಸಚಿವ ರೋಹನ್ ಖಂವಟೆ ಕೂಡ ದೆಹಲಿಗೆ ತೆರಳಿದರು. ಇದೀಗ ಶಾಸಕ ಪ್ರವೀಣ ಅರ್ಲೆಕರ್ ಕೂಡ ದೆಹಲಿಗೆ ತೆರಳಿದ್ದಾರೆ.
ಕಳೆದ ವರ್ಷ ಕಾಂಗ್ರೇಸ್ ಪಕ್ಷದಿಂದ ಬಿಜೆಪಿಗೆ ಬಂದಿದ್ದ ಅಲೆಕ್ಸ ಸಿಕ್ಕೆರಾ ರವರಿಗೆ ನೀಲೇಶ್ ಕಾಬ್ರಾಲ್ ರವರ ರಾಜೀನಾಮೆ ಪಡೆದು ಮಂತ್ರಿ ಪದವಿ ನೀಡಲಾಗಿತ್ತು. ಇದೀಗ ಮತ್ತೆ ಹಲವು ತಿಂಗಳುಗಳ ನಂತರ ಮಂತ್ರಿಮಂಡಳ ವಿಸ್ತರಣೆಯ ವೇಗ ಪಡೆದುಕೊಂಡಿದೆ. ಡಿಸೆಂಬರ್ 19 ರಂದು ರಾಜ್ಯ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಕೂಡ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ರವರನ್ನು ಭೇಟಿಯಾಗಿದ್ದರು. ಆದರೆ ರಾಣೆ ಭೇಟಿ ರಾಜಕೀಯವಲ್ಲ ಎಂದು ಹೇಳಲಾಗುತ್ತಿದ್ದರೂ ಕೂಡ ಮುಖ್ಯಮಂತ್ರಿಗಳೊಂದಿಗೆ ಇತರ ಶಾಸಕರು ಸಚಿವರುಗಳು ದೆಹಲಿಗೆ ದೌಡಾಯಿಸಿರುವುದು ಮಂತ್ರಿಮಂಡಳ ವಿಸ್ತರಣೆಯ ವಿಷಯಕ್ಕೆ ಪುಷ್ಠಿ ನೀಡುತ್ತದೆ.
ಸದ್ಯ ನಡೆಯುತ್ತಿರುವ ಗೋವಾ ರಾಜಕೀಯ ಚಟುವಟಿಕೆಗಳ ಹಿಂದೆ ಮಂತ್ರಿಮಂಡಳದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂದೇ ಸುದ್ಧಿಯಾಗಿದ್ದರೂ ಕೂಡ ಸಂಭಾವ್ಯರ ಪಟ್ಟಿ ಲಭ್ಯವಾಗಿಲ್ಲ.