ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಪ್ರತಿನಿತ್ಯ ಅಗತ್ಯವಿರುವ ತರಕಾರಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳಿಗೆ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯವನ್ನು ಅವಲಂಭಿಸಿದೆ. ಗೋವಾದಲ್ಲಿ ಕೊಂಚ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತದೆಯಾದರೂ ಗೋವಾ ರಾಜ್ಯದಲ್ಲಿ ಬೇಡಿಕೆ ಇರುಷ್ಟು ಪ್ರಮಾಣದಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಆದರೆ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಕಳೆದ 2023-24 ರಲ್ಲಿ ತರಕಾರಿ ಬೆಳೆಯುವ ಜಾಗ 315 ಹೆಕ್ಟೇರ್ ನಷ್ಟು ಹೆಚ್ಚಳವಾಗಿದೆ.

ಗೋವಾದಲ್ಲಿ 2022-23 ರಲ್ಲಿ 8374 ಹೆಕ್ಟೇರ್ ಜಮೀನಿನಲ್ಲಿ ತರಕಾರಿ ಬೆಳೆಯಲಾಗಿತ್ತು. ಆದರೆ 2023-24 ರಲ್ಲಿ 8689 ಹೆಕ್ಟೇರ್ ಕ್ಷೇತ್ರದಲ್ಲಿ ತರಕಾರಿ ಬೆಳೆಯಲಾಗುತ್ತಿದೆ.

ಕೋವಿಡ್ ನಂತರ ಗೋವಾದಲ್ಲಿ ತರಕಾರಿ ಬೆಳೆಯುವ ಕ್ಷೇತ್ರದಲ್ಲಿ ಹೆಚ್ಚಳವಾಗುತ್ತಿದೆ. ಗೋವಾದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತಮ್ಮ ಖಾಲಿ ಜಾಗದಲ್ಲಿ ತರಕಾರಿ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಗೋವಾ ಸರ್ಕಾರದ ಹೇಳಿಕೆಯಂತೆಯೇ ಗೋವಾ ರಾಜ್ಯ ಸ್ವಾವಲಂಭಿಯಾಗುವತ್ತ ಸಾಗಿದೆ. ಆದರೆ ಗೋವಾದಲ್ಲಿ ತರಕಾರಿ ಉತ್ಪಾದನೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಸಾಗಿದರೂ ಕೂಡ ಗೋವಾದಲ್ಲಿ ಹೆಚ್ಚುತ್ತಿರುವ ಜನ ಸಂಖ್ಯೆ ಮತ್ತು ಪ್ರವಾಸಿಗರ ರಾಜ್ಯವಾಗಿರುವುದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಗೋವಾಕ್ಕೆ ಬರುವ ತರಕಾರಿಯ ಪ್ರಮಾಣವೂ ಹೆಚ್ಚಳವಾಗುತ್ತಲೇ ಇರುವುದು ವಿಶೇಷವಾಗಿದೆ.