ಶಿರಸಿ: ದೇಶ‌ ಕಾಯುವ ಸೈನಿಕರ‌ ರಕ್ಷಣೆ, ಸೈನಿಕರ ಬಲ ವೃದ್ಧಿ, ಆತ್ಮಸ್ಥೈರ್ಯ ವೃದ್ದಿ, ಆರೋಗ್ಯ ಭಾಗ್ಯ ಕರುಣಿಸಲು ಹಾಗೂ ಲೋಕದಲ್ಲಿ ಧರ್ಮ ನೆಲೆಸಲಿ, ದೇಶ ರಾಮ ರಾಜ್ಯವಾಗಲಿ, ಲೋಕ ಕಲ್ಯಾಣವಾಗಲಿ ಎಂದು
ಸಂಕಲ್ಪಿಸಿ ಶ್ರೀಕೃಷ್ಣ ಜನ್ಮಾಷ್ಟಮೀ ಪ್ರಯುಕ್ತ ಶ್ರೀ ಸೋಂದಾ  ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಎಂಟು ಲಕ್ಷ ತುಳಸಿ ಅರ್ಚನೆ ಸೋಮವಾರ ನಡೆಯಿತು.
ಸ್ವರ್ಣವಲ್ಲೀ ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ಮಹಾ ಸ್ವಾಮೀಜಿಗಳ ಸಂಕಲ್ಪದಂತೆ ಕಳೆದ 24 ವರ್ಷದಿಂದ ನಿರಂತರ ನಡೆಯುತ್ತಿದ್ದು, ಈ ವರ್ಷ ಬೆಳ್ಳಿ ವರ್ಷವಾಗಿದೆ.  ಈ ಬಾರಿ ಕೂಡ 8 ಲಕ್ಷ ತುಳಸೀ ಅರ್ಚನೆ ಶ್ರೀಗಳ‌ ಮಾರ್ಗದರ್ಶನದಲ್ಲಿ‌ ಸಂಪನ್ನಗೊಂಡಿತು.
 ತುಳಸಿ ಅರ್ಚನೆಯು ಎರಡುನೂರು ವೈದಿಕರನ್ನು ಒಳಗೊಂಡು ಶಾಸ್ತ್ರೋಕ್ತವಾಗಿ ಶ್ರೀ ಮಠದಲ್ಲಿ ನೆರವೇರಿತು. 1999 ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶರಕ್ಷಣೆಗಾಗಿ  ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು  ಕೋಟಿ ತುಳಸಿ ಅರ್ಚನೆಯನ್ನು ಸಂಕಲ್ಪಿಸಿ ನೆರವೇರಿಸಿದ್ದರು. ಅವತ್ತಿನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿವರ್ಷವೂ ಎಂಟು ಲಕ್ಷ ತುಳಸಿ ಅರ್ಚನೆಯು ನಡೆಯುತ್ತ ಬಂದಿದೆ.
 ಭಗವಾನ್ ಶ್ರೀಕೃಷ್ಣನಿಗೆ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು, ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ  ಉಪಸ್ಥಿತಿಯಲ್ಲಿ ಕಲ್ಪೋಕ್ತ ಮಹಾಪೂಜೆ, ಮಹಾಮಂಗಳಾರತಿಯು ನೆರವೇರಿತು. ಈ ತುಳಸಿ ಅರ್ಚನೆಯನ್ನು ಶ್ರೀ ಮಠದ ಅಧ್ಯಾಪಕ ವೃಂದದವರು, ಉಮ್ಮಚಿಗಿ, ಸ್ವರ್ಣವಲ್ಲೀ, ನಡಗೋಡು ಪಾಠಶಾಲೆಗಳ ವಿದ್ಯಾರ್ಥಿಗಳು ನೆರವೇರಿಸಿದರು. ಭಗವಾನ್ ಶ್ರೀ ಕೃಷ್ಣನಿಗೆ ಅರ್ಚನೆಗೆ ತುಳಸಿಯು ಶ್ರೀ ಮಠದ ಸಮಸ್ತ ಭಕ್ತರಿಂದ ಸಾಗರೋಪಾದಿಯಲ್ಲಿ ಒದಗಿಬಂತು.