ಸುದ್ದಿ ಕನ್ನಡ
ಸಿರಸಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಡಿಜಿಟಲ್ ಇಂಡಿಯಾ’ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಅತ್ಯುತ್ತಮ ಗುಣಮಟ್ಟದ 4G ಮೊಬೈಲ್ ನೆಟ್ವರ್ಕ್ ಹಾಗೂ ಅಂತರ್ಜಾಲ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಶಿರಸಿಯ ತಮ್ಮ ಕಚೇರಿಯಲ್ಲಿ ಬಿಎಸ್ಎನ್ಎಲ್ (BSNL) ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿನ ದೂರಸಂಪರ್ಕ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ಮತ್ತು ನೆಟ್ವರ್ಕ್ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ಇಂತಹ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದ್ದು, ಇಂದಿನ ಸಭೆಯಲ್ಲಿ ಪ್ರಮುಖ ತಾಂತ್ರಿಕ ಸವಾಲುಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯ ಅನೇಕ ಭಾಗಗಳಲ್ಲಿ ಹೊಸ 4G ಟವರ್ಗಳು ಕಾರ್ಯಾರಂಭ ಮಾಡಿದ್ದರೂ ತಾಂತ್ರಿಕ ದೋಷಗಳಿಂದಾಗಿ ಜನರಿಗೆ ಸಮರ್ಪಕವಾಗಿ ನೆಟ್ವರ್ಕ್ ತಲುಪದೆ ತೊಂದರೆಯಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿ ಗ್ರಾಹಕರಿಗೆ ಅಡೆತಡೆಯಿಲ್ಲದ ಸೇವೆ ಒದಗಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೆ, ನಿರಂತರ ನೆಟ್ವರ್ಕ್ ಸೇವೆಗಾಗಿ ಟವರ್ಗಳ ಬ್ಯಾಟರಿ ಬ್ಯಾಕಪ್ ಮತ್ತು ಪವರ್ ಪ್ಲಾಂಟ್ಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸುವಂತೆ, ಹಳೆಯ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು (OFC) ಆಧುನೀಕರಣಗೊಳಿಸುವುದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಹೊಸ ಒಎಫ್ಸಿ ಲೈನ್ಗಳನ್ನು ತ್ವರಿತವಾಗಿ ಅಳವಡಿಸುವಂತೆ ಸೂಚಿಸಿದರು.
ಇದರೊಂದಿಗೆ, ಹೊಸ 4G ಟವರ್ಗಳಿಗೆ ತ್ವರಿತಗತಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮತ್ತು ಕ್ಷೇತ್ರ ಮಟ್ಟದಲ್ಲಿರುವ ತಾಂತ್ರಿಕ ಸಿಬ್ಬಂದಿಗಳ ಕೊರತೆಯನ್ನು ನೀಗಿಸಿ ನಿರ್ವಹಣೆಯನ್ನು ಚುರುಕುಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜೊತೆಗೆ, ಜಿಲ್ಲೆಗೆ ಈಗಾಗಲೇ ಹೊಸದಾಗಿ ಮಂಜೂರಾಗಿರುವ (Sanctioned) ಬಿಎಸ್ಎನ್ಎಲ್ ಟವರ್ಗಳ ನಿರ್ಮಾಣಕ್ಕಾಗಿ ಸೂಕ್ತ ಸ್ಥಳಗಳನ್ನು ಶೀಘ್ರವಾಗಿ ಗುರುತಿಸಿ, ಮುಂದಿನ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
”ಉತ್ತರ ಕನ್ನಡ ಜಿಲ್ಲೆಯು ಅತಿ ಹೆಚ್ಚು ಬಿಎಸ್ಎನ್ಎಲ್ ಟವರ್ಗಳು ಹಾಗೂ ಅತ್ಯಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜಿಲ್ಲೆಯಾಗಿದೆ.
ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ನಮ್ಮ ಜಿಲ್ಲೆಯ ಜನರಿಗೆ ಬಿಎಸ್ಎನ್ಎಲ್ ಜೀವನಾಡಿಯಂತಿದೆ. ಆದ್ದರಿಂದ, ವಿಶೇಷ ಆದ್ಯತೆಯ ಮೇರೆಗೆ ಬಿಎಸ್ಎನ್ಎಲ್ನ ಪ್ರಮುಖ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳು ಯಾವುದೇ ನೆಪ ಅಥವಾ ಕಾರಣಗಳನ್ನು ನೀಡದೆ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಜನರಿಗೆ ಅತ್ಯುತ್ತಮ ಸೇವೆ ತಲುಪಿಸಬೇಕು” ಎಂದು ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಭೆಯಲ್ಲಿ ಮಂಗಳೂರಿನ ಬಿಎಸ್ಎನ್ಎಲ್ ಪ್ರಧಾನ ವ್ಯವಸ್ಥಾಪಕರು (GM) ಶ್ರೀ ಹೇಮಂತ್ ಸದಾಶಿವ್, ಕಾರವಾರದ ಉಪ ಪ್ರಧಾನ ವ್ಯವಸ್ಥಾಪಕರು (DGM) ಶ್ರೀ ಮಲ್ಲಿಕಾರ್ಜುನ ತಾಳಿಕೋಟಿ, ವಿವಿಧ ವಿಭಾಗಗಳ ಸಹಾಯಕ ಪ್ರಧಾನ ವ್ಯವಸ್ಥಾಪಕರು (AGM) ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
