ಸುದ್ದಿ ಕನ್ನಡ ವಾರ್ತೆ
ಗೋವಾ : ಅಖಿಲ ಗೋವಾ ಕನ್ನಡ ಮಹಾಸಂಘ 2013 ರಲ್ಲಿ ಸ್ಥಾಪನೆಯಾಗಿ, ಅಂದಿನಿಂದ ಇಂದಿನವರೆಗೆ ಗೋವಾದ ಕನ್ನಡಿಗರನ್ನು ಒಗ್ಗೂಡಿಸಿ, ಅವರಿಗೆ ಬೆನ್ನೆಲುಬಾಗಿ ನಿಂತು ಅದ್ಭುತ ಕಾರ್ಯವನ್ನು ಮಾಡಿದೆ ಎಂದು ಹುಕ್ಕೇರಿ ಹಿರೇಮಠ ಸಂಸ್ಥಾನದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಗೋವಾದ ಜುವಾರಿ ನಗರದ ಝರಿ ಯಲ್ಲಾಲಿಂಗೇಶ್ವರ ಮಠದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಆಶೀರ್ವದಿಸಿ ಅವರು ಮಾತನಾಡಿದರು.
ಅಖಿಲ ಗೋವಾ ಕನ್ನಡ ಮಹಾಸಂಘವು 2013 ರಲ್ಲಿ ಡಾ. ಸಿದ್ದಣ್ಣ ಮೇಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಹಲವಾರು ವರ್ಷಗಳಿಂದ ಕನ್ನಡಿಗರನ್ನು ಕೂಡಿಸಿ, ಕನ್ನಡಿಗರಿಗೆ ಆಗುವ ಅನ್ಯಾಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.
ಡಾ. ಸಿದ್ದಣ್ಣ ಮೇಟಿ ಅವರ ನಂತರ ಹನುಮಂತಪ್ಪ ರೆಡ್ಡಿ ಶಿರೂರು ಅವರು ಮಹಾಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ರುದ್ರಯ್ಯ ಸ್ವಾಮಿ ಹಿರೇಮಠ ಅವರು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. “ರುದ್ರಯ್ಯ ಸ್ವಾಮಿ ಹಿರೇಮಠ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು, ಪ್ರೀತಿ, ವಿಶ್ವಾಸದಿಂದ ಮಹಾಸಂಘವನ್ನು ಮುನ್ನಡೆಸಿ, ಒಳ್ಳೆಯ ಕಾರ್ಯ ಮಾಡಲಿ” ಎಂದು ಶ್ರೀಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸಿದ್ದಣ್ಣ ಮೇಟಿ ಅವರು, “ಗೋವಾ ಕನ್ನಡಿಗರಿಗೆ ಬೆನ್ನೆಲುಬು ಎಂದರೆ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರೇ. ಇಂದಿಗೂ ಎಲ್ಲರಿಗೂ ತಂದೆಯ, ಗುರುವಿನ ಸ್ಥಾನದಲ್ಲಿ ನಿಂತುಕೊಂಡು ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ” ಎಂದು ಹೇಳಿದರು.
ನೂತನ ಅಧ್ಯಕ್ಷರಾದ ರುದ್ರಯ್ಯ ಸ್ವಾಮಿ ಹಿರೇಮಠ ಅವರು ಮಾತನಾಡಿ “ಹತ್ತು ವರ್ಷಗಳಿಂದ ನಮಗೆ ಗುರುಗಳು ಆಶೀರ್ವದಿಸುತ್ತ ಬಂದಿದ್ದಾರೆ. ಇಂದು ನಾನು ಕನ್ನಡ ಮಹಾಸಂಘದ ಅಧ್ಯಕ್ಷನಾದ ತಕ್ಷಣ ಅವರು ಹೇಳಿರುವ ಒಂದೇ ಒಂದು ಮಾತು – ಎಲ್ಲರನ್ನು ಒಗ್ಗೂಡಿಸಿಕೊಂಡು ಪ್ರೀತಿಯಿಂದ ಈ ಮಹಾಸಂಘವನ್ನು ಮುನ್ನಡೆಸಬೇಕು ಎಂಬುದು. ಅದನ್ನು ಖಂಡಿತವಾಗಿ ಅನುಸರಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಮುರಳಿ ಮೋಹನ್ ಶೆಟ್ಟಿ, ಪಡದಯ್ಯ ಸ್ವಾಮಿ ಹಿರೇಮಠ ಅವರು ಸೇರಿದಂತೆ,
ಉಪಾಧ್ಯಕ್ಷರಾದ ಶಿವಾನಂದ ಮಸಬಿನಹಾಳ, ನಾಗರಾಜ್ ಕೊಡಗಲಿ, ರಮೇಶ್ ಗೌಡರ, ಮಲ್ಲಿಕಾರ್ಜುನ ಹಿರೇಮಠ, ಬಸವರೆಡ್ಡೆಪ್ಪ ಅಬ್ಬಿಗೇರಿ, ಶಿವಾನಂದ ಬಿಂಗಿ, ಬಸವರಾಜ ಮೇಟಿ, ರೇವಣಸಿದ್ಧಯ್ಯ ಹಿರೇಮಠ, ಅನಿಲ್ ಸನದಿ, ಬಸವರಾಜ ಗೌಡರ, ಕರಿಯಪ್ಪ ಜೈನಪುರ, ಮಡಿವಾಳಯ್ಯ ಗಣಾಚಾರಿ, ಶೀಲಾ ಮೆಸ್ತಾ, ಮಹೇಶ್ ಬಳಬಟ್ಟಿ, ಮಹಾಂತೇಶ್ ಕರಗೇರ, ಗುರುಪಾದಯ್ಯ ಹಿರೇಮಠ, ಪಾರ್ವತಿ ಛಲವಾದಿ, ಶ್ರೀಮತಿ ರೇಷ್ಮಾ ಚಾಂದಕೊಟಿ, ಕಂಬಳಯ್ಯ ಹಿರೇಮಠ, ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಸ್ವಾಮೀಜಿ* ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
