ಸುದ್ದಿ ಕನ್ನಡ ವಾರ್ತೆ
ಗೋವಾ: ಸೇವೆ ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 12ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾರ್ಯ ನೀಡಿದ್ದ ಗೋವಾ ಕದಂಬ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ಇತರ ನೌಕರರ ಮೇಲೆ ಗೋವಾ ಸರ್ಕಾರವು ಅತ್ಯಾವಶ್ಯಕ ಸೇವೆಗಳ ನಿರ್ವಹಣೆ ಕಾಯ್ದೆ ಎಸ್ಮಾ ಜಾರಿಗೊಳಿಸಿದೆ. ಈ ಕುರಿತಂತೆ ಈಗಾಗಲೇ ಗ್ರಹ ಇಲಾಖೆ ಅಧಿಕೃತ ಆದೇಶವನ್ನು ಹೊರಡಿಸಿದೆ.

ಅತ್ಯವಶ್ಯಕ ಸೇವೆ ಮತ್ತು ನಿರ್ವಹಣೆ ಕಾಯ್ದೆ 1988ರ ಕಲಂ ಮೂರು ಮತ್ತು ಉಪಕಲಂ ಒಂದರ ಅಡಿಯಲ್ಲಿ ಈ ನಿಷೇಧಜ್ಞೆ ಜಾರಿಗೊಳಿಸಲಾಗಿದೆ. ಇದರಿಂದ ಮುಂದಿನ ಆರು ತಿಂಗಳವರೆಗೆ ಯಾವುದೇ ರೀತಿಯ ಮುಷ್ಕರ ಅಥವಾ ಕೆಲಸ ಸ್ಥಗಿತಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಈ ನಿಷೇಧದ ನಡುವೆಯೂ ನೌಕರರು ಮುಷ್ಕರ ನಡೆಸಿದರೆ ಅವರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಗೋವಾ ಕದಂಬ ಸಾರಿಗೆ ನಿಗಮದ ಅಧ್ಯಕ್ಷ ಉಲ್ಲಾಸ್ ನಾಯಕ್ ತುಯೇಕರ್ ರವರು ನೌಕರ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಮತ್ತು ಗೋವಾದಲ್ಲಿ ಪ್ರಸ್ತುತ ಪ್ರವಾಸಿ ಸೀಸನ್ ಇರುವುದರಿಂದ ಜನಸಾಮಾನ್ಯರಿಗೆ ಮತ್ತು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನೌಕರರು ಮುಷ್ಕರದ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಮತ್ತು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.