ಸುದ್ದಿ ಕನ್ನಡ ವಾರ್ತೆ
ಗೋವಾದಿಂದ ಕರ್ನಾಟಕದ ತಮ್ಮ ಊರಿಗೆ ದೀಪಾವಳಿ ಹಬ್ಬ ಆಚರಣೆಗೆ ಬರುತ್ತಿದ್ದ ವ್ಯಕ್ತಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಗೋವಾ ಬೆಳಗಾವಿ ಹೆದ್ದಾರಿ ಚೋರ್ಲಾ ನಲ್ಲಿ ನಡೆದಿದೆ.

ಗೋವಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಖಾನಾಪುರ ನಿವಾಸಿ ಮಹೇಶ್ ಮಾದರ್ ಎಂಬ ವ್ಯಕ್ತಿಯೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವೋಲ್ವೋ ಪ್ರವಾಸಿ ಬಸ್ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ.

ದೀಪಾವಳಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಲು ಇವರು ಗೋವಾದಿಂದ ಕರ್ನಾಟಕದ ತಮ್ಮ ಮನೆಗೆ ತೆರಳುತ್ತಿದ್ದರು. ಆದರೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವೋಲ್ವೋ ಬಸ್ ಹಾಗೂ ಬೈಕ್ ಡಿಕ್ಕಿ ಸಂಭವಿಸಿ ಮಹೇಶ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗೆ ಮುನ್ನವೇ ಸಾವನ್ನಪ್ಪಿದ್ದಾರೆ.

ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ಎಲ್ ಎಚ್ ಗವಂಡಿ ತಮ್ಮ ಸೌದ್ಯೋಗಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದ್ದಾರೆ. ಮತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.