ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಬೇಡ್ತಿ ಅಘನಾಶಿನಿ ನದಿ ಜೋಡಣೆ ಹಾಗೂ ನದಿ ತಿರುವು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಎಲ್ಲೆಡೆ ಪ್ರತಿಭಟನೆ ನಡೆಯುತ್ತಲೇ ಇದೆ. ಆದರೆ ಸರ್ಕಾರ ಮಾತ್ರ ಈ ಯೋಜನೆಯ ಕೆಲಸವನ್ನು ಮುಂದುವರಿಸಿದಂತೆ ಕಂಡುಬರುತ್ತದೆ.
ಕಳೆದ ಮೂರು ನಾಲ್ಕು ದಿನಗಳಿಂದ ಯಲ್ಲಾಪುರ ತಾಲೂಕಿನ ಮಂಚಿಕೇರಿ , ಸೋಂದಾ ಸೇರಿದಂತೆ ವಿವಿಧ ಭಾಗಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದು ಇದು ನದಿ ತಿರುವು ಯೋಜನೆಯ ವೈಮಾನಿಕ ಸಮೀಕ್ಷೆ ಆಗಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಅವೈಜ್ಞಾನಿಕ ನದಿ ತಿರುವು ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ಮಂಗಳವಾರ ನವೆಂಬರ್ 3 ರಂದು ಬೃಹತ್ ಪ್ರತಿಭಟನೆ ರಸ್ತೆ ತಡೆ ನಡೆಸಲಾಗಿದೆ. ಆದರೆ ಇತ್ತ ಪ್ರತಿಭಟನೆಯಲ್ಲಿ ನಡೆಯುತ್ತಿದ್ದರೆ , ಇನ್ನೊಂದೆಡೆಗೆ ಮಂಚಿಕೇರಿ, ಸೋಂದಾ ಭಾಗದಲ್ಲಿ ಕೆಳಮಟ್ಟದಲ್ಲಿ ವಿಮಾನ ಒಂದು ಸುತ್ತು ಹೊಡೆಯುತ್ತಲೇ ಇತ್ತು. ಬುಧವಾರವೂ ಕೂಡ ಇದೇ ರೀತಿ ವಿಮಾನ ಸುತ್ತು ಹೊಡೆಯುತ್ತಿದೆ. ಇದು ವೈಮಾನಿಕ ಸಮೀಕ್ಷೆ ಆಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಿಸರ ವಿರೋಧಿ ಈ ಯೋಜನೆಗೆ ಜಿಲ್ಲೆಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದರೂ ಕೂಡ ಸರ್ಕಾರ ಮಾತ್ರ ಇದನ್ನು ಲೆಕ್ಕಿಸದೆ ತನ್ನ ಕೆಲಸವನ್ನು ಮುಂದುವರಿಸಿದೆಯೇ.,? ಎಂಬ ಪ್ರಶ್ನೆ ಮೂಡಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಬಸವರಾಜ್ ಬೊಮ್ಮಾಯಿ ಒತ್ತಾಯ….
ನದಿ ತಿರುವು ಯೋಜನೆಗೆ ಉತ್ತರ ಕನ್ನಡದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಕೂಡ ಅತ್ತ ಸಂಸದ ಬಸವರಾಜ್ ಬೊಮ್ಮಾಯಿ ಯೋಜನೆ ಅನುಷ್ಠಾನಕ್ಕೆ ಪಟ್ಟು ಹಿಡಿದಂತೆ ಹೇಳಿಕೆ ನೀಡುತ್ತಿದ್ದಾರೆ. ಈ ಯೋಜನೆ ಜಾರಿಗೆ ಪಕ್ಷಾತೀತ ಹೋರಾಟ ಅಗತ್ಯ ಎಂಬ ಹೇಳಿಕೆ ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
