ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಸಹಾಯಕ ಕಮಿಷನರ್ ಆಗಿ ಮಂಗಳೂರಿಗೆ ಪದೋನ್ನತಿ ಹೊಂದಿರುವ ಕಾರಣ ಇಂದು ಮಧ್ಯಾಹ್ನ ತಾಲೂಕಾ ಆಡಳಿತ ಕಛೇರಿಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ವತಿಯಿಂದ ಸನ್ಮಾನಿಸಿ ಬಿಳ್ಕೂಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು. ತಾಲೂಕಾ ಆಡಳಿತಕ್ಕೆ ಸಂಬಂಧಿಸಿದಂತೆ ಎಲ್ಲಾ ತಾಲೂಕಿನಲ್ಲಿರುವಂತೆ ಜೋಯಿಡಾ ತಾಲೂಕಿನಲ್ಲಿಯೂ ಸಮಸ್ಯೆಗಳಿವೆ, ಸವಾಲುಗಳಿವೆ, ನನ್ನ ಸೇವಾ ಅವಧಿಯಲ್ಲಿ ತಾಲೂಕಿನ ಸಮಸ್ಯೆ ಗಳಿಗೆ ಸ್ಪಂದಿಸಿ ಪರಿಹಾರ ನೀಡುವಲ್ಲಿ ಇಲ್ಲಿನ ಎಲ್ಲಾ ಅಧಿಕಾರಿಗಳು ಜೊತೆ ನಿಂತಿದ್ದೀರಿ. ನಗರ ಆಡಳಿತ ಸಂಸ್ಥೆ ಗಳೇ ಇಲ್ಲದ ತಾಲೂಕು ಹೇಗಿರಲಿದೆಯೊ ಎನ್ನುವ ಅಭಿಪ್ರಾಯ ಮೊದಲು ನನಗಿತ್ತು. ಆದರೆ ಈಗ ಪ್ರಕೃತಿ ಸೌಂದರ್ಯದ ಜೋಯಿಡಾ ತಾಲೂಕು ಹೀಗೆ ಇದ್ದರೆ ತುಂಬಾ ಚೆನ್ನ ಎನಿಸುತ್ತದೆ. ಸಾರ್ವಜನಿಕ ಸಂಪರ್ಕ್, ಗ್ರಾಮೀಣ ಕೆಲಸದಲ್ಲಿ ಕಂಡ ಅನುಭವ ತುಂಬಾ ಖುಷಿಯಾಗಿದೆ. ಆಡಳಿತದಲ್ಲಿ ತಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.

ತಾಲೂಕಾ ಪಂಚಾಯತ್ ಕಾ.ನಿ.ಅಧಿಕಾರಿ ಭಾರತಿ ಎನ್ ಅವರು , ನಮ್ಮ ಇಲಾಖೆಯ ಸರ್ಕಾರದ ವಿವಿಧ ಯೋಜನೆಯ ಅನುಷ್ಠಾನದಲ್ಲಿ ನಮಗೆ ಆಗಾಗ ಮಾರ್ಗದರ್ಶನ ನೀಡುತ್ತಾ, ಸಹೋದರಿಯ ರೀತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ,ಸಲಹೆ ನೀಡುತ್ತಾ, ಆಡಳಿತ ಸೇವೆಯನ್ನು ಕಳಂಕ ರಹಿತವಾಗಿ,ಯಾವ ಕಪ್ಪುಚುಕ್ಕೆಯೂ ಇಲ್ಲದಂತೆ ಸುಗಮವಾಗಿ ನಡೆಸಿಕೊಂಡು ಬಂದ ಸರಳ, ಸಜ್ಜನಿಕೆಯ ಅಧಿಕಾರಿ ಮಂಜುನಾಥ್ ಮುನ್ನೊಳ್ಳಿ ಅವರು ಪದೋನ್ನತಿ ಪಡೆದು ವರ್ಗಾವಣೆಗೊಳ್ಳುವುದು ಹೆಮ್ಮೆಯ ಸಂಗತಿ. ಅವರಿಗೆ ಇನ್ನು ಮುಂದೇನೂ ಹೆಚ್ಚಿನ ಅಧಿಕಾರ, ಗೌರವ ದೊರೆಯುವಂತಾಗಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗ ಪಟಗಾರ ಮಾತನಾಡಿ, ಪ್ರಾಮಾಣಿಕ, ಸೌಮ್ಯ ಸ್ವಭಾವದ ಓರ್ವ ತಾಲೂಕಾ ಆಡಳಿತ ಅಧಿಕಾರಿ ಜೋಯಿಡಾಕ್ಕೆ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿತ್ತು. ಸಾಹಿತ್ಯ ಪರಿಷತ್ ಗೆ ನೀಡಿದ ಸಹಕಾರ, ಬೆಂಬಲವನ್ನು ನೆನೆದು ಪರಿಷತ್ ಹಾಗೂ ತಾಲೂಕಿನ ಸಮಸ್ತ ಜನತೆಯ ಪರವಾಗಿ ಅಭಿನಂದಿಸಿದರು.
ಬಿಳ್ಕೋಡುಗೆ ಸಮಾರಂಭದಲ್ಲಿ ಪಾಲ್ಗೊಂಡು ತಾಲೂಕಿನ ಎಲ್ಲಾ ಅಧಿಕಾರಿಗಳು ತಹಶೀಲ್ದಾರ ರವರ ಕಾರ್ಯವೈಖರಿ, ಸರಳತೆ, ಸಮಸ್ಯೆಗೆ ಸ್ಪಂದಿಸುವ ಸೌಜನ್ಯತೆಯನ್ನು ನೆನೆದು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ತಾಲೂಕಾ ವೈದ್ಯಾಧಿಕಾರಿ ಸುಜಾತಾ ಉಕ್ಕಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ ನಾಯ್ಕ, ಸಮಾಜ ಕಲ್ಯಾಣ ಅಧಿಕಾರಿ ವಾಸಂತಿ ಗೌಡ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಆನಂದ ಪಾಟೀಲ, ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಇಲಾಖೆಯ ವತಿಯಿಂದ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ರವರನ್ನು ಸನ್ಮಾನಿಸಿ ಬಿಳ್ಕೊಟ್ಟರು.