ಸುದ್ದಿ ಕನ್ನಡ ವಾರ್ತೆ

ಹಳಿಯಾಳ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಪ್ರಕಟಿಸಿರುವ 2025-26ನೇ ಸಾಲಿನ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ಗೆ
ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ (DPITI) ಆಯ್ಕೆಯಾಗಿದೆ.

ಖಾಸಗಿ ಐಟಿಐ ವಿಭಾಗದಲ್ಲಿ ಒಂದೇ ಒಂದು ಪ್ರಶಸ್ತಿಯನ್ನು ಘೋಷಿಸಿದ್ದು ಕರ್ನಾಟಕಕ್ಕೆ “ನಂಬರ್ ಒನ್” ಸಂಸ್ಥೆ ಎಂದು ಭಾಜನವಾಗಿರುವುದು ಹಳಿಯಾಳಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ(KSDC), ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ(KSDA) ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(KDEM) ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ‘ಕೌಶಲ್ಯ ಕರ್ನಾಟಕ ಶೃಂಗಸಭೆ-2026’ ಕಾರ್ಯಕ್ರಮವು ನವೆಂಬರ್ 3ರಿಂದ 5ರವರೆಗೆ ನಡೆಯಲಿದೆ. ಈ ಶೃಂಗಸಭೆಯ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ದಿನೇಶ್ ಆರ್.ನಾಯ್ಕ್ ತಿಳಿಸಿದ್ದಾರೆ.

ಗುಣಮಟ್ಟದ ತಾಂತ್ರಿಕ ತರಬೇತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ DPITI ಸಂಸ್ಥೆಯ ಈ ಸಾಧನೆಗೆ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ,ಸಂಸ್ಥೆಯ ಪ್ರಾಚಾರ್ಯರು, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.

ಈ ಪ್ರಶಸ್ತಿಯು ಸಂಸ್ಥೆಯ ಗುಣಮಟ್ಟದ ತರಬೇತಿ, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಮುಖಿ ಶಿಕ್ಷಣಕ್ಕೆ ಸಂದ ಗೌರವವಾಗಿದೆ.