ಸುದ್ದಿ ಕನ್ನಡ ವಾರ್ತೆ

ಗೋವಾ: ಗೋವಾ ಕನ್ನಡ ಸಮಾಜ ಪಣಜಿಯು ಕಳೆದ 40 ವರ್ಷಗಳಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಇಂದು ಗೋವಾದಾದ್ಯಂತ ನೆಲೆಸಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದೆ. ನಾಲ್ಕು ದಶಕಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗೋವಾದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಗೋವಾದ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಿ ಈ ಐತಿಹಾಸಿಕ ಉತ್ಸವವನ್ನು ಯಶಸ್ವಿಗೊಳಿಸಲಾಗಿದೆ.

 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಗೋವಾ ಕನ್ನಡ ಸಮಾಜ ಪಣಜಿ, ಇವರ ಸಯುಕ್ತ ಆಶಯದಲ್ಲಿ ಗೋವಾದ ಪರ್ವರಿಯ ಆಜಾದ್ಭವನ ದಲ್ಲಿ ಭಾನುವಾರ 71ನೇಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಭಾಷಾ ಮತ್ತು ಸಂಸ್ಕೃತಿ ಸೊಗಡು, ದಿಂಡಿಮ ಉತ್ಸವ _2026. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಮಾತನಾಡಿ- ಗೋವಾದಲ್ಲಿರುವ ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸಲು ಕರ್ನಾಟಕ ಸರ್ಕಾರ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಿದೆ. ಇದು  ಗೋವಾದ ಎಲ್ಲ ಕನ್ನಡಿಗರಿಗೆ ಒಂದು ಬೃಹತ್ ವೇದಿಕೆಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ನುಡಿದರು

 

ಕಳೆದ 40 ವರ್ಷಗಳ ಹಿಂದೆ ಗೋವಾಕ್ಕೆ ಬಂದು ಇಲ್ಲಿ ಕನ್ನಡ ಸಮಾಜ ಕಟ್ಟಿ ಹಿರಿಯ ಕನ್ನಡಿಗ ವೀರಪ್ಪ ಹುಬ್ಬಳ್ಳಿ ರವರು ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸಿದ್ದಾರೆ. ನವೆಂಬರ್ 1 ರಂದೆ ಇಂದು ಹೊರರಾಜ್ಯ ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿರುವುದು ಹೆಚ್ಚು ಮಹತ್ವ. ಹಿಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರಿಗೆ ಕನ್ನಡದ ಮೇಲೆ ಎಷ್ಟು ಪ್ರೀತಿ ಮತ್ತು ಅಭಿಮಾನ ಇದೆ ಎಂದು ತೋರಿಸುತ್ತದೆ ಎಂದು ಸಂತೋಷ್ ಹಾನಗಲ್ ನುಡಿದರು.

 

ಸಮಾರಂಭದ ಉದ್ಘಾಟನೆ ನೆರವೇರಿಸಿದ ಆದಾಯ ಇಲಾಖೆ ಪಣಜಿ ಉಪ ಆಯುಕ್ತರಾದ ಪ್ರಿಯಾಂಕಾ ಕಾಂಬಳೆ ಮಾತನಾಡಿ- 2500 ವರ್ಷಗಳಷ್ಟು ಇತಿಹಾಸ ಇರುವ ಕನ್ನಡ ನಮ್ಮ ಮಾತೃಭಾಷೆ ಎಂದು ಹೇಳಲು ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜನೆಗೆ ಸಹಕಾರ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಗೋವಾ ಕನ್ನಡಿಗರ ಪರವಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ವೇದಿಕೆ ಮೇಲೆ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ರಾಷ್ಟ್ರೀಯ ವರದಿಗಾರ ಅನಿಲ್ ಸನದಿ ಮಾತನಾಡಿ_ ಹೊರನಾಡು ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಆಯೋಜಿಸಲು ನಮಗೆ ಹೆಮ್ಮೆ ಅನಿಸುತ್ತದೆ. ಇಂದು ನಾವೆಲ್ಲ ಕನ್ನಡಿಗರು ಸೇರಿ ಕನ್ನಡ ರಾಜ್ಯೋತ್ಸವವನ್ನು ಇಲ್ಲಿ ಆಚರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಉತ್ತರ ಕನ್ನಡದ (ಜೊಯಿಡಾ )ಲೇಖಕಿ ಸುಕನ್ಯಾ ದೇಸಾಯಿ ಮಾತನಾಡಿ_ ಕನ್ನಡ ಎನ್ನುವುದು ಕೇವಲ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ , ನಮ್ಮ ಪರಂಪರೆ, ನಮ್ಮ ನಾಡಿನ ಕವಿಗಳು ವಚನಕಾರರು ನಮ್ಮ ನಾಡನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.

ಗೋವಾದಲ್ಲಿ ಕನ್ನಡಿಗರ ಸಾಧನೆ ಮತ್ತು ಕೊಡುಗೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರದ ನಿವೃತ್ತ ನಿರ್ದೇಶಕ ಸುರೇಶ್ ಶಾನಭಾಗ, ಹಾಗೂ ಮಪುಸ ಸೇಂಟ್ ಜೀವಿಯರ ಮಾಧ್ಯಮಿಕ ಶಾಲೆಯ ಪ್ರಾಧ್ಯಾಪಕ ಮಹಾಬಲ ಭಟ್ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ಕನ್ನಡ ಜ್ಯೋತಿ ಬೆಳಗಿಸಲಾಯಿತು.

ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ್ ಕುಮಾರ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು, ಕನ್ನಡ ಸಮಾಜದ ಸದಸ್ಯ ಚಿನ್ಮಯ ಎಂ ಸಿ ರವರು ಕಾರ್ಯಕ್ರಮ ನಿರೂಪಿಸಿದರು, ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ್ ಲೋಣಿ ಕೊನೆಯಲ್ಲಿ ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ಗೋವಾದ ಕನ್ನಡಿಗರಿಂದ ಹಾಗೂ ಚಿನ್ನದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಗೋವಾದ ವಿವಿಧಡೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.