ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಹನುಮಾನಲೇನ್ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಇಂದು ನಾವು ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾದ ರಾಷ್ಟ್ರೀಯ ಏಕತಾ ದಿನ ವನ್ನು ಆಚರಿಸುತ್ತಲಿದ್ದೇವೆ.ಪ್ರತಿವರ್ಷ ಅಕ್ಟೋಬರ್ 31 ರಂದು ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಈ ದಿನವನ್ನಾಗಿ ಆಚರಿಸಲಾಗುತ್ತದೆ.2014ರಲ್ಲಿ ಭಾರತ ಸರ್ಕಾರವು ಈ ದಿನವನ್ನು ಅಧಿಕೃತವಾಗಿ ಘೋಷಿಸಿತು.ಇವತ್ತು ನಾವು ಕೇವಲ ಸರ್ದಾರ್ ಪಟೇಲರನ್ನು ನೆನಪಿಸಿಕೊಳ್ಳವುದಷ್ಟೇ ಅಲ್ಲ,ದೇಶದ ಸಮಗ್ರತೆ,ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಪ್ರತಿಜ್ಞೆ ಮಾಡಬೇಕು.ದೇಶದ ಅಭಿವೃದ್ಧಿಗೆ ನಾವೆಲ್ಲರೂ ಜಾತಿ-ಧರ್ಮಗಳ ಭೇದಭಾವವನ್ನು ಮರೆತು ಒಗ್ಗಟ್ಟಿನಿಂದ ಶ್ರಮಿಸೋಣ.ಈ ಸುಸಂದರ್ಭದಲ್ಲಿ ನಾವೆಲ್ಲರೂ ದೇಶದ ಏಕತೆ ಮತ್ತು ಸುರಕ್ಷತೆಗಾಗಿ ಕೈಜೋಡಿಸೋಣ ಎಂದು ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ರವರು 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶವು ರಾಜ ಸಂಸ್ಥಾನಗಳಾಗಿ ಹಂಚಿಹೋಗಿತ್ತು.ಆ ಎಲ್ಲಾ ಚಿಕ್ಕ ಸಂಸ್ಥಾನಗಳನ್ನು ಒಟ್ಟುಗೂಡಿಸಿ, ಅಖಂಡ ಭಾರತವನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಯಶಸ್ವಿಯಾಗಿ ನಿರ್ವಹಿಸಿದರು.ಅವರ ದೃಡ ನಿರ್ಧಾರ ಮತ್ತು ಹೋರಾಟವಿಲ್ಲದೆ ಇಂದು ನಾವು ಕಾಣುವ ಏಕರೂಪದ ಭಾರತ ದೇಶವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು.ನಮ್ಮ ದೇಶವು ವಿವಿಧ ಭಾಷೆಗಳು, ಧರ್ಮಗಳು,ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿದ್ದರು ನಾವೆಲ್ಲರೂ ಮೊದಲು ಭಾರತೀಯರು ಎಂಬ ಭಾವನೆಯಿಂದ ಒಂದಾಗಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ನಮ್ಮ ದೇಶದ ಅತಿದೊಡ್ಡ ಶಕ್ತಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.