ಸುದ್ದಿ ಕನ್ನಡ ವಾರ್ತೆ
ಚನ್ನಮ್ಮನ ಕಿತ್ತೂರು: ಹಂಪಿ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವ ವೇದಿಕೆಯ ವಿಚಾರಗೋಷ್ಠಿಯಲ್ಲಿ ಮಂಡನೆಯಾಗುವ ಎಲ್ಲ ಚಿಂತನೆಗಳು ಪುಸ್ತಕ ರೂಪದಲ್ಲಿ ಹೊರಬರಲಿ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಗಂಗಾಧರಯ್ಯ ಹೇಳಿದರು.
202ನೆಯ ಕಿತ್ತೂರು ಉತ್ಸವದ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಿತ್ತೂರು ಉತ್ಸವವು ಕೇವಲ ಭಾಷಣಕ್ಕೆ ಸೀಮಿತವಾಗದೆ ಬರಹ ರೂಪಕ್ಕೆ ಬಂದರೆ ಅಧಿಕೃತ ಇತಿಹಾಸ ಸಿದ್ಧಪಡಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಕಿತ್ತೂರು ಸಂಸ್ಥಾನದ ಇತಿಹಾಸಕಾರ ದೊಡ್ಡಭಾವೆಪ್ಪ ಮೂಗಿಯವರ ಕುರಿತು ಉಪನ್ಯಾಸ ನೀಡಿದರು. ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಹಳ್ಳಿಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಅಲೆದಾಡಿ ಕಿತ್ತೂರು ಸಂಸ್ಥಾನದ ಐತಿಹಾಸಿಕ ದಾಖಲೆಗಳು, ಜನಪದ ಸಾಹಿತ್ಯವನ್ನು ಸಂಗ್ರಹಿಸಿದ ಮುಗಿಯವರು ಕಿತ್ತೂರು ಇತಿಹಾಸದ ಮೊದಲ ಸಂಶೋಧಕರಾಗಿದ್ದು, ಅವರು ಸಂಗ್ರಹಿಸಿದ ಸಮಗ್ರ ಮಾಹಿತಿಯು ಪುಸ್ತಕ ರೂಪದಲ್ಲಿ ಹೊರಬರಲಿ ಎಂದು ಹೇಳಿದರು.
ಹಿರಿಯ ಸಾಹಿತಿಗಳಾದ ಬಸವರಾಜ ಕುಪ್ಪಸಗೌಡರ ಅವರು ಮಾತೃ ಸ್ವರೂಪಿಣಿ ಕಿತ್ತೂರು ಚೆನ್ನಮ್ಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ತ್ಯಾಗ, ಶೌರ್ಯ, ಸಾಹಸಗಳಿಗೆ ಪ್ರತೀಕವಾದ ಕಿತ್ತೂರು ರಾಣಿ ಚನ್ನಮ್ಮ ತಾಯಿಯು ಮಾನವೀಯ ಸಂದರ್ಭದಲ್ಲಿ ಮಾತೃ ಹೃದಯದ ಮಮತೆಯ ಮಡಿಲೇ ಆಗಿದ್ದಳು ಎಂದು ಹೇಳಿದರು.
ಡಾ. ಶೇಖರ ಹಲಸಗಿ ಸ್ವಾಗತಿಸಿದರು. ಶಿವಮೂರ್ತಿ ಕುರಗುಂದ ಅವರು ನಿರೂಪಿಸಿದರು, ಸಂಗೀತಾ ಹೊಸೂರ ವಂದಿಸಿದರು.
