ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ದೈವಜ್ಞ ಕಲ್ಯಾಣ ಮಂಟಪದ ವಾಣಿಜ್ಯ ಸಂಕೀರ್ಣದ ಗಣೇಶ ಶಿರಾಲಿ ಎಂಬುವವರಿಗೆ ಸೇರಿದ ಕರ್ನಾಟಕ ಒನ್ನಲ್ಲಿ ಕಾಣಿಸಿಕೊಂಡಿದ್ದ ಅತ್ಯಂತ ಅಪರೂಪದ ಬೆಕ್ಕು ಹಾವನ್ನು (ಕ್ಯಾಟ್ ಸ್ನೇಕ್) ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ಬೆಕ್ಕಿನ ಕಣ್ಣಿನಂತಹ ಲಂಬವಾದ ಪಾಪೆಗಳನ್ನು ಹೊಂದಿರುವ ಈ ಹಾವು ಪ್ರಕೃತಿಯಲ್ಲಿ ಬಹಳ ವಿರಳವಾಗಿ ಕಂಡುಬರುವ ನಿಶಾಚರಿ ಜೀವಿಯಾಗಿದ್ದು, ಹೆಚ್ಚಾಗಿ ಮರಗಳ ಮೇಲೆಯೇ ವಾಸಿಸುತ್ತದೆ. ಜನವಸತಿ ಪ್ರದೇಶಗಳಲ್ಲಿ ಇದು ಕಾಣ ಸಿಗುವುದು ಅತ್ಯಂತ ಅಪರೂಪವಾಗಿದ್ದು, ಇದು ವಿಷಕಾರಿ ಗುಂಪಿಗೆ ಸೇರಿದರೂ ಮನುಷ್ಯರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಎಂದು ಹೇಳಿದ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಹಾವನ್ನು ಪ್ರದರ್ಶಿಸಿ ಜನ ಜಾಗೃತಿ ಮೂಡಿಸಿದರು.
ಈ ಹಾವು ವಿಷಕಾರಿ ಸ್ವಭಾವ ಹೊಂದಿರುವುದರಿಂದ ಅದನ್ನು ಕಂಡಾಗ ಸಾರ್ವಜನಿಕರು ಮುಟ್ಟಲು ಅಥವಾ ಹಿಡಿಯಲು ಪ್ರಯತ್ನಿಸದೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅರಣ್ಯ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಹಾವಿಗೆ ಯಾವುದೇ ಹಾನಿಯಾಗದೇ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
