Banner Ad

ಸುದ್ದಿ ಕನ್ನಡ ವಾರ್ತೆ
​ದಾಂಡೇಲಿ: ನಗರದ ಪ್ರಸಿದ್ಧ ಶ್ರೀ ದಾಂಡೇಲಪ್ಪ ಜಾತ್ರೆಯ ಅಂಗವಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಅಕ್ಟೋಬರ್ 20ರಂದು ಅದ್ಧೂರಿ ರಾಮಲೀಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.

​ನಗರದ ಡಿಲಕ್ಸ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6:30ರಿಂದ ರಾತ್ರಿ 8ರ ವರೆಗೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ರಾಮಲೀಲೋತ್ಸವ ನಡೆಯಲಿದೆ. ಈ ಬಾರಿ 52 ಅಡಿ ಎತ್ತರದ ರಾವಣ ಹಾಗೂ 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ, ಆಂಬುಲೆನ್ಸ್, ವೈದ್ಯರು ಹಾಗೂ ದಾದಿಯರ ವ್ಯವಸ್ಥೆ ಮಾಡಲಾಗಿದೆ ಎಂದರು.

Banner Ad

​ಡಿವೈಎಸ್‌ಪಿ ಬಿ. ಗಿರೀಶ್ ಮಾತನಾಡಿ, ಶ್ರೀ ಧಾಂಡೇಲಪ್ಪ ಜಾತ್ರೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಾತ್ರೆಯ ಮುನ್ನಾದಿನ ಸಂಜೆ 6 ಗಂಟೆಯಿಂದ ಜಾತ್ರೆ ಮುಗಿಯುವವರೆಗೆ ಧಾಂಡೇಲಿಯಿಂದ ಹಳಿಯಾಳಕ್ಕೆ ಹಾಗೂ ಹಳಿಯಾಳದಿಂದ ಧಾಂಡೇಲಿಗೆ ಸಂಚರಿಸುವ ಬಸ್‌ಗಳು ಮತ್ತು ಇತರ ವಾಹನಗಳಿಗೆ ಕರ್ಕಿ-ಬಜಾರ್‌ನಾಕಾ,ಬಾಂಬೂಗೇಟ್ ಹಾಗೂ ಸೋಮಾನಿ ವೃತ್ತದ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
​ದ್ವಿಚಕ್ರ ವಾಹನಗಳ ಪಾರ್ಕಿಂಗ್ ನಗರದ ಕನ್ಯಾ ವಿದ್ಯಾಲಯದಲ್ಲಿ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಜನತಾ ವಿದ್ಯಾಲಯದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಟೋ ರಿಕ್ಷಾಗಳು ಹಳಿಯಾಳ ರಸ್ತೆಯ ಮೂರನೇ ಗೇಟ್‌ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದರು.
​ಪಿಎಸ್‌ಐ ಅಮಿನ್ ಅತ್ತಾರ ಮಾತನಾಡಿ, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಮಾನಿಟರ್‌ಗಳನ್ನು ಅಳವಡಿಸಲಾಗಿದೆ ಎಂದರು.
​ಸಿಪಾಯಿ ಶಿವಾನಂದ ಅಂಬಿಗೇರ, ಪಿಎಸ್‌ಐ ಶಿವಾನಂದ ನಾವದಗಿ, ಪಿಎಸ್‌ಐ ಮಂಜುಳಾ ರಾವ್‌ಜಿ, ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜಿ., ಕುಶಾಲಪ್ಪ ಹಾಗೂ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.

Banner Ad